ಬಳ್ಳಾರಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರದ್ದು ಎನ್ನಲಾಗಿರುವ ಆಡಿಯೋ ಬಿಡುಗಡೆ ಮಾಡಿ, ರಮೇಶ್ ಜಾರಕಿಹೊಳಿ ಹಲವು ಆರೋಪಗಳನ್ನು ಮಾಡಿದ್ದಾರೆ. ಸಿಡಿ ಜಾಲದಲ್ಲಿ ಡಿಕೆಶಿ ಪಾತ್ರದ ಕುರಿತು ಸಿಬಿಐ ತನಿಖೆ ಮಾಡುವಂತೆ ಅವರು ಒತ್ತಾಯಿಸಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಂದಕ್ಕೂ ಮೋದಿ, ಬೊಮ್ಮಾಯಿ ವಿರುದ್ದ ಡಿಕೆಶಿ, ಸಿದ್ದರಾಮಯ್ಯ ಮಾತನಾಡುತ್ತಾರೆ ಎಂದರು.
ಆದರೆ ಈಗ ಯಾಕೆ ಡಿಕೆಶಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಾಯಿ ಬಿಡುತ್ತಿಲ್ಲ. ಇತರ ಕಾಂಗ್ರೆಸ್ ನಾಯಕರೂ ಸಹ ಬಾಯಿ ಬಿಡುತ್ತಿಲ್ಲ. ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಡಿಕೆಶಿ ಸ್ಪಷ್ಟನೆ ನೀಡಲಿ. ಇಲ್ಲವಾದರೆ ಕಾಂಗ್ರೆಸ್ ಮರ್ಯಾದೆ ಹೋಗಲಿದೆ ಎಂದು ಪ್ರತಿಕ್ರಿಯಿಸಿದರು. ಇದೇ ವೇಳೆ, ಕಾಂಗ್ರೆಸ್ ಅಂದರೆ ಕೇವಲ ಡಿ.ಕೆ.ಶಿವಕುಮಾರ್-ಸಿದ್ದರಾಮಯ್ಯ ಕಟ್ಟಿದ ಪಕ್ಷವಲ್ಲ. ಸ್ವಾತಂತ್ರ‍್ಯ ಹೋರಾಟಗಾರರು ಕಟ್ಟಿದ ಪಕ್ಷ ಎಂದು ಹೇಳಿದರು.
ರಮೇಶ ಜಾರಕಿಹೊಳಿವರ ಸಿಬಿಐ ತನಿಖೆಯ ಆಗ್ರಹದ ಕುರಿತಾಗಿ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ನಿರ್ಧಾರ ಮಾಡುತ್ತಾರೆ. ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡಿ, ಕೋರ್ಟ್ ಪೊಲೀಸ್ ಇಲಾಖೆಗೂ ದಾಖಲೆ ನೀಡುವಂತೆ ನಿರ್ದೇಶನ ನೀಡಿದೆ. ಈಗಾಗಲೇ ಇಲಾಖೆ ದಾಖಲೆ ಕೊಟ್ಟಿದೆ ಎಂದು ತಿಳಿಸಿದರು.
ಟಿಕೆಟ್ ಹಂಚಿಕೆ ವಿಚಾರ: ಕೇಂದ್ರದಿಂದ ಪ್ರತಿ ಕ್ಷೇತ್ರದಲ್ಲಿ ಸರ್ವೇ ಮಾಡಲಾಗುತ್ತಿದೆ. ಸಾಮಾನ್ಯ ಕಾರ್ಯಕರ್ತರ ಅಭಿಪ್ರಾಯದ ಮೇಲೆ ಟಿಕೆಟ್ ನಿರ್ಧಾರ ಮಾಡಲಾಗುವುದು ಎಂದು ಹೇಳಿದರು.
ದೇಶ, ರಾಜ್ಯದಲ್ಲಿ ಹಿಂದುತ್ವದ ಗಾಳಿ: ಪ್ರಸ್ತುತ ರಾಜಕಾರಣದಲ್ಲಿ ಹಿಂದೂ ರಾಷ್ಟ್ರೀಯತೆ ನಡೆಯುತ್ತಿದ್ದು ಈಗ ಎಲ್ಲ ಜಾತಿವಾದಿಗಳು ಸೋತು ಹಾಳಾಗಿ ಹೋಗುತ್ತಿದ್ದಾರೆ. ದೇಶದಲ್ಲಿ ಹಿಂದುತ್ವ, ರಾಜ್ಯದಲ್ಲಿ ಹಿಂದುತ್ವ, ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ ಹಿಂದುತ್ವದ ಗಾಳಿ ಬೀಸುತ್ತಿದೆ. ಡಿಕೆಶಿ,ಸಿದ್ದರಾಮಯ್ಯಗೆ ಸೋಲಿನ ಭಯ ಕಾಡುತ್ತಿರುವುದರಿಂದ ತಾವೂ ಹಿಂದೂ ಎಂದು ಹೇಳುತ್ತಿದ್ದಾರೆ. ಇವರಿಗೆ ಏಕಾಏಕಿ ಯಾಕೆ ಹಿಂದುತ್ವದ ಮೇಲೆ ಪ್ರೀತಿ ಬಂತು? ಎಂದು ಟೀಕಿಸಿದರು.
ಇದನ್ನೂಓದಿ: ರಮೇಶ್ ಜಾರಕಿಹೊಳಿಯನ್ನು ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಿ: ಡಿ.ಕೆ.ಶಿವಕುಮಾರ್