ಬಳ್ಳಾರಿ: ಕ್ಷೇತ್ರದ ಜನರೊಂದಿಗೆ ಇರುವ ಸಂಪರ್ಕ, ಪಕ್ಷದ ನಿಷ್ಠೆ, ಪಾದಯಾತ್ರೆಯಲ್ಲಿ ಅವರು ಕೈಗೊಂಡ ಸೇವೆ ಸೇರಿದಂತೆ ಎಲ್ಲವನ್ನೂ ಪರಿಗಣಿಸಿ ಟಿಕೆಟ್ ನೀಡಲಾಗುವುದು. ಈ ಬಾರಿ ಹೊಸ ಮುಖಗಳಿಗೂ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಬಳ್ಳಾರಿ ತಾಲೂಕಿನ ಮೋಕಾ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸರ್ವೇ ಮಾಡಿದ ವರದಿಗಳು ಕೈ ಸೇರಿದ್ದು 150 ಜನರಿಗೆ ಮೊದಲೇ ಟಿಕೆಟ್ ಘೋಷಣೆ ಮಾಡುವ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ ಎಂದು ತಿಳಿಸಿದರು.
ಬಿಜೆಪಿಗರಿಗೆ ನಡುಕ ಶುರುವಾಗಿದೆ: ಯುವ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ಅಭೂತಪೂರ್ವ ಬೆಂಬಲ, ಪ್ರೋತ್ಸಾಹ ವ್ಯಕ್ತವಾಗಿದೆ. ಇದನ್ನು ಕಂಡು ಬಿಜೆಪಿ ಅವರಿಗೆ ನಡುಕ ಶುರುವಾಗಿದೆ. ಹೀಗಾಗಿ ನಮ್ಮ ಬಗ್ಗೆ ಮನಬಂದಂತೆ ಮಾತಾಡುತ್ತಿದ್ದಾರೆ. ಜನ ಬಿಜೆಪಿ ಆಡಳಿತದ ಬೆಲೆ ಏರಿಕೆ ನೀತಿಯಿಂದ ಬೇಸತ್ತು ಹೋಗಿದ್ದಾರೆ. ನಮಗೆ ಈ ಬಾರಿ ಜನಾಶೀರ್ವಾದ ಖಚಿತ. 150 ಸೀಟು ಗೆಲ್ಲುತೇವೆ ಎಂದು ಡಿಕೆಶಿ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯವರಿಗೆ ರಾತ್ರಿ ಮಲಗುವಾಗಲೂ ಬೆಳಗ್ಗೆ ಏಳುವಾಗಲೂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರನ್ನು ನೆನಪಿಸಿಕೊಳ್ಳದಿದ್ದರೆ ನಿದ್ದೆ ಬರುವುದಿಲ್ಲ. ರಾಹುಲ್ ಗಾಂಧಿ ಅವರ ಬಗ್ಗೆ ಕೀಳು ಮಟ್ಟದ ಶಬ್ದವನ್ನು ಬಿಜೆಪಿ ಬಳಕೆ ಮಾಡುತ್ತಿದೆ. ಯತ್ನಾಳ್, ಬಿಎಸ್‌ವೈ, ಶ್ರೀರಾಮುಲು ಅವರು ಸೇರಿ ಯಾರು ಏನಾದರೂ ಅಂದುಕೊಳ್ಳಲಿ. ಯಡಿಯೂರಪ್ಪ ಅವರ ವಯಸ್ಸು, ಹಿರಿತನಕ್ಕೆ ನಾವು ಬಚ್ಚಾಗಳೇ. ಬಿಜೆಪಿ ಈಗ ಜನ ಸಂಕಲ್ಪ ಯಾತ್ರೆ ಆಯೋಜಿಸುತ್ತಿದೆ. ಆದರೆ ರಾಜ್ಯದ ಜನತೆ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರಲು ಸಂಕಲ್ಪ ಮಾಡಿದ್ದಾರೆ ಎಂದರು.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ: ಸಮಾವೇಶಕ್ಕೆ ಬಂದಿದ್ದ ಮಹಿಳೆ ಹೃದಯಾಘಾತದಿಂದ ಸಾವು