ಬಳ್ಳಾರಿ: ವಿಕಲಚೇತನರ ಸೇವಾ ಖಾಯಂಮಾತಿ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ವಿಕಲಚೇತನರ ಹಾಗೂ ವಿವಿಧೋದ್ದೇಶ (ಎಂ ಆರ್ ಡಬ್ಲ್ಯೂ) ಮತ್ತು ಗ್ರಾಮೀಣ ಪುನರ್ವಸತಿ (ವಿಆರ್ ಡಬ್ಲ್ಯು) ಕಾರ್ಯಕರ್ತರ ರಾಜ್ಯ ಒಕ್ಕೂಟದ ಜಿಲ್ಲಾ ಘಟಕದ ಪದಾಧಿಕಾರಿಗಳು ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಗಡಿಗಿ ಚನ್ನಪ್ಪ ವೃತ್ತದ ಬಳಿ ಒಕ್ಕೂಟದ ಜಿಲ್ಲಾ ಘಟಕದ ನೂರಾರು ವಿಕಲಚೇತನರು ಜಮಾಯಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ಗಡಿಗಿ ಚನ್ನಪ್ಪ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಭೆ ನಡೆಸಿ ಮನವಿ ಸಲ್ಲಿಸಿದರು.
ಕಳೆದೊಂದು ದಶಕಗಳ ಅವಧಿಗೆ ಎಂಆರ್ಡಬ್ಲ್ಯು, ವಿಆರ್ಡಬ್ಲ್ಯು ಹಾಗೂ ಯುಆರ್ಡಬ್ಲ್ಯು ಆಗಿ ಕರ್ತವ್ಯ ನಿರ್ವಹಿಸುತ್ತಿರುವವರ ಸೇವೆಯನ್ನು ಖಾಯಂ ಗೊಳಿಸಬೇಕು. ವಿಕಲಚೇತನರ ಮಾಸಾಶನವನ್ನು 5 ಸಾವಿರಕ್ಕೆ ಹೆಚ್ಚಿಸಬೇಕು. ವಿಕಲಚೇತನರ ಬ್ಯಾಕ್ಲಾಗ್ ಹುದ್ದೆಗಳಿಗೆ ಕೂಡಲೇ ನೇಮಕಾತಿ ಮಾಡಬೇಕು. ರಾಜ್ಯ ವಿಕಲಚೇತನರ ಅಧಿನಿಯಮದ ರಾಜ್ಯ ಆಯುಕ್ತರ ಹುದ್ದೆಯನ್ನು ವಿಕಲಚೇತನರಿಗೆ ಮೀಸಲಿರಿಸಿ, ಈ ಹುದ್ದೆಗೆ ಅರ್ಹ ವಿಕಲಚೇತನರನ್ನೆ ನೇಮಿಸಬೇಕೆಂದು ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಸಿ. ಕರಿಬಸಜ್ಜ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿಕಲಚೇತನರಾದ ಬಿ. ಮಂಜುನಾಥ, ಜೆ. ರವಿನಾಯ್ಕ, ಜಿ. ರುದ್ರೇಗೌಡ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.