ಬಳ್ಳಾರಿ: 2 ಸಾವಿರಕ್ಕೂ ಹೆಚ್ಚು ವೈದ್ಯರನ್ನು, 700ಕ್ಕೂ ಹೆಚ್ಚು ಪ್ಯಾರಾಮೆಡಿಕಲ್, ನರ್ಸಿಂಗ್ ಸಿಬ್ಬಂದಿಯನ್ನು ತಿಂಗಳೊಳಗೆ ನೇರ ನೇಮಕಾತಿ ಮಾಡಿಕೊಳ್ಳುವುದಕ್ಕೆ ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದರು.
ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಸಾರ್ವಜನಿಕರ ಬಳಕೆಗೆ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (ಎಂಆರ್‌ಐ), ಗ್ರಂಥಾಲಯ, ಉಪನ್ಯಾಸಕರ ಸಭಾಂಗಣ ಮತ್ತು ಪರೀಕ್ಷಾ ಸಭಾಂಗಣ, 300 ವಿದ್ಯಾರ್ಥಿಗಳ ಆಸನ ಸಾಮರ್ಥ್ಯದ ಉಪನ್ಯಾಸ ರಂಗಮಂದಿರ, ಸ್ನಾತಕೋತ್ತರ ವಿದ್ಯಾರ್ಥಿಗಳ ವಸತಿ ನಿಲಯ ಮತ್ತು ದಂತ ವೈದ್ಯಕೀಯ ಮಹಿಳಾ ವಿದ್ಯಾರ್ಥಿಗಳ ಹಾಸ್ಟೆಲ್‍ಗಳ ಶಂಕು ಸ್ಥಾಪನೆಯನ್ನು ವರ್ಚುವಲ್ ತಂತ್ರಜ್ಞಾನದ ಮೂಲಕ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕುಳಿತು ನೆರವೇರಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ವೈದ್ಯರಿಗೆ ಉತ್ತೇಜನ ನೀಡಲು ಬಡ್ತಿ ಮತ್ತು ವೇತನ ಹೆಚ್ಚಳಕ್ಕೆ ನಿರ್ಧರಿಸಲಾಗಿದ್ದು, ನಿರ್ಧಿಷ್ಟ ಕಾನೂನುಗಳನ್ನು ಬದಲಾವಣೆ ಮಾಡುತ್ತಿದ್ದೇವೆ. ಖಾಸಗಿ-ಸರ್ಕಾರಿ ಸಹಭಾಗಿತ್ವದಲ್ಲಿ ಆರೋಗ್ಯ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಸಿಎಸ್‍ಆರ್ ಸಮಿತಿ ರಚಿಸಲಾಗಿದ್ದು, ಗೀತಾಂಜಲಿ ಕಿರ್ಲೋಸ್ಕರ್ ಅವರನ್ನು ಗೌರವಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದೆ ಎಂದು ತಿಳಿಸಿದರು.
ಈ ಹಿಂದೆ ಕಾರಾಗೃಹ ಕಟ್ಟಡವಾಗಿದ್ದ 173 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ವಿಮ್ಸ್ ತಲೆಯೆತ್ತಿದೆ. ಗತವೈಭವವನ್ನು ಆರೋಗ್ಯ ಕ್ಷೇತ್ರದಲ್ಲಿ ಮರುಕಳಿಸುವ ನಿಟ್ಟಿನಲ್ಲಿ ವಿಮ್ಸ್ ಸಂಸ್ಥೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವಿಮ್ಸ್ ಕೇವಲ ನಮ್ಮ ರಾಜ್ಯದ ಜನರಿಗೆ ಚಿಕಿತ್ಸೆ ನೀಡುವುದಕ್ಕೆ ಸೀಮಿತವಾಗಿಲ್ಲ. ಆಂಧ್ರಪ್ರದೇಶ ಮತ್ತು ತೆಲಂಗಾಣ ಜನರಿಗೆ ಚಿಕಿತ್ಸೆ ನೀಡುವ ಸಂಜೀವಿನಿಯಾಗಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಮ್ಸ್ ಸಂಸ್ಥೆಯನ್ನು ಏಮ್ಸ್ ಮಾದರಿಯನ್ನಾಗಿ ಪರಿವರ್ತಿಸಲು ಹಾಗೂ ಎಂಬಿಬಿಎಸ್ ವಿದ್ಯಾರ್ಥಿಗಳ ಪ್ರವೇಶಾತಿಯನ್ನು 150ರಿಂದ 250ಕ್ಕೆ ಹೆಚ್ಚಿಸಿ ಉನ್ನತೀಕರಣಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಗೆ ಸರ್ಕಾರ ಸ್ಪಂದಿಸಿ ವಿಮ್ಸ್ ಸಂಸ್ಥೆಗೆ ಅವಶ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಲು ಕಟ್ಟಡ ಕಾಮಗಾರಿಗಳು ಮತ್ತು ಉಪಕರಣಗಳನ್ನು ಅಳವಡಿಸಿಲು ಅನುಮೋದನೆ ನೀಡಲಾಗಿದೆ.
ಪ್ರಸ್ತುತ ವಿಮ್ಸ್ ಸಂಸ್ಥೆಯ ಅಧೀನದಲ್ಲಿರುವ ಆಸ್ಪತ್ರೆಗೆ ಪ್ರತಿದಿನ 2 ಸಾವಿರ ಹೊರ ರೋಗಿಗಳು ಮತ್ತು 500ರಿಂದ 800 ರವರೆಗೆ ಒಳರೋಗಿಗಳಾಗಿ ಚಿಕಿತ್ಸೆಗೆ ಬರುತ್ತಿರುತ್ತಾರೆ. ಹಾಗೂ ಎಂಬಿಬಿಎಸ್ 150, ಬಿಡಿಎಸ್-50, ಪಿಜಿ-120, ಸೂಪರ್ ಸ್ಪೆಷಾಲಿಟಿ-05, ಪ್ಯಾರಾಮೆಡಿಕಲ್-150, ಬಿಎಸ್‍ಸಿ ನರ್ಸಿಂಗ್-100+30 ವಿದ್ಯಾರ್ಥಿಗಳ ಪ್ರವೇಶಾತಿ ಸಾಮರ್ಥ್ಯ ಹೊಂದಿದೆ ಎಂದು ಸಚಿವ ಸುಧಾಕರ್ ವಿವರಿಸಿದರು.
ಕೋವಿಡ್ 2ನೇ ಅಲೆ ಬಗ್ಗೆ ಜನರಲ್ಲಿ ಅರಿವು ಮೂಡಿಸಿ:
ಕೋವಿಡ್ 2ನೇ ಅಲೆಯು ಮೊದಲಿಗಿಂತ ಅತ್ಯಂತ ವೇಗವಾಗಿ ಹರಡುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡಿಕೊಳ್ಳುವುದರ ಜೊತೆಗೆ ಜನರಲ್ಲಿ ಈ ಕುರಿತು ಅರಿವು ಮೂಡಿಸುವ ಕೆಲಸ ಮಾಡಿ ಎಂದು ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಖಾತೆ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಎಲ್ಲ ತಾಲೂಕುಗಳ ತಹಶೀಲ್ದಾರರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ ನಮಗೆ ತುಂಬಾ ಅನುಭವ ಕಲಿಸಿದೆ. ಅಧಿಕಾರಿಗಳು ಸೋಂಕು ಹೆಚ್ಚಳವಾಗದಂತೆ ಹಾಗೂ ಈ ಕುರಿತು ನಿರ್ಲಕ್ಷ್ಯ ವಹಿಸದೆ ಪ್ರಾಮಾಣಿಕವಾಗಿ ಕೆಲಸ ಮಾಡಿ. ಕೋವ್ಯಾಕ್ಸಿನ್ ವೇಸ್ಟ್ ಆಗದಂತೆ ನೋಡಿಕೊಳ್ಳಿ. ಗಡಿ ಭಾಗದ ಜನರಿಗೆ ಲಸಿಕೆ ಬಗ್ಗೆ ಅರಿವಿನ ಕೊರತೆಯಿದೆ. ಆಯಾ ಪ್ರದೇಶಗಳಿಗೆ ಭೇಟಿ ನೀಡಿ ಜನರಿಗೆ ಲಸಿಕೆಯ ಕುರಿತು ಅರಿವು ಮೂಡಿಸಿ ಮತ್ತು ಲಸಿಕೆ ಹಾಕಿಸುವ ಕೆಲಸ ಮಾಡಿ ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.