ಬಳ್ಳಾರಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ) 10 ಆಮ್ಲಜನಕ ಸಾಂದ್ರಕ(ಆಕ್ಸಿಜನ್ ಕಾನ್ಸಂಟ್ರೇಟರ್) ಗಳನ್ನು ಬಳ್ಳಾರಿ ಜಿಲ್ಲಾಸ್ಪತ್ರೆಗೆ ದೇಣಿಗೆಯಾಗಿ ನೀಡಿದೆ.
ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಅವರ ಸಮ್ಮುಖದಲ್ಲಿ ಜಿಲ್ಲಾ ಆಸ್ಪತ್ರೆಗೆ ಕಾನ್ಸಂಟ್ರೇಟರ್‍ಗಳನ್ನು ನೀಡಲಾಯಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಅವರು ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದಾದ್ಯಂತ ಆಮ್ಲಜನಕ ಸಾಂದ್ರಕ(ಆಕ್ಸಿಜನ್ ಕಾನ್ಸಂಟ್ರೇಟರ್) ಗಳನ್ನು ಪೂರೈಸುವ ಕೆಲಸ ಮಾಡಲಾಗುತ್ತಿದೆ. ಬಳ್ಳಾರಿ ಜಿಲ್ಲೆಯ 25 ಕಾನ್ಸಂಟ್ರೇಟರ್ಗಳ ಪೈಕಿ, ಇಲ್ಲಿನ ಜಿಲ್ಲಾಸ್ಪತ್ರೆಗೆ 10 ಕಾನ್ಸಂಟ್ರೇಟರ್‍ಗಳನ್ನು ನೀಡಲಾಗಿದೆ. ಉಳಿದ 15ಅನ್ನು ಜಿಲ್ಲೆಯ ಬೇರೆ ತಾಲೂಕುಗಳಿಗೆ ನೀಡಿದೆ ಎಂದರು.
ಲಾಕ್‍ಡೌನ್ ಮುಂದುವರಿಯಲಿ:
ಜಿಲ್ಲೆಯಲ್ಲಿ ಕೊರಾನಾ ಪ್ರಕರಣ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿವೆ. ಈ ಕುರಿತು ಜನರು ನಿರ್ಲಕ್ಷ್ಯ ವಹಿಸದೆ ಕೋವಿಡ್ ಬಗ್ಗೆ ಜಾಗೃತಿ ವಹಿಸಬೇಕು. ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮುಂದಿನ ಜೂನ್ 30ರವರೆಗೆ ಲಾಕ್‍ಡೌನ್ ಮುಂದುವರೆಸಿದರೇ ಒಳ್ಳೆಯದು ಎಂಬ ಅಭಿಪ್ರಾಯವನ್ನು ಈ ಸಂದರ್ಭದಲ್ಲಿ ಅವರು ವ್ಯಕ್ತಪಡಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್.ಜನಾರ್ಧನ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ)ನ ಕಲ್ಯಾಣ ಕರ್ನಾಟಕ ಪ್ರಾದೇಶಿಕ ವಿಭಾಗದ ಪ್ರಾದೇಶಕ ನಿರ್ದೇಶಕ ಪುರುಷೋತ್ತಮ ಪಿ.ಕೆ, ಬಳ್ಳಾರಿ ಜಿಲ್ಲಾ ನಿರ್ದೇಶಕ ಚಂದ್ರಶೇಖರ್ ಶೆಟ್ಟಿ ಇತರರಿದ್ದರು.