ಬಳ್ಳಾರಿ: ಮಹಾನಗರ ಪಾಲಿಕೆ ವತಿಯಿಂದ ಅಂದಾಜು ₹3 ಕೋಟಿ ವೆಚ್ಚದಲ್ಲಿ ಸುಸಜ್ಜಿತ ತರಕಾರಿ ಮಾರುಕಟ್ಟೆ ನಿರ್ಮಿಸಲಾಗಿದ್ದರೂ ಅದರ ಮುಂಭಾಗ ಗಲೀಜು ತುಂಬಿದೆ. ಹೀಗಾಗಿ, ಮಾರುಕಟ್ಟೆ ಸೌಂದರ್ಯವೇ ಕಳೆಗುಂದಿದೆ.
ಮಹಾನಗರದಲ್ಲಿ ಎರಡು ಮಾರುಕಟ್ಟೆಗಳಿದ್ದು, ದೊಡ್ಡ ಹಾಗೂ ಸಣ್ಣ ಮಾರುಕಟ್ಟೆಗಳು ಎಂದು ಗುರುತಿಸಲಾಗಿದೆ. ಸಣ್ಣ ಮಾರುಕಟ್ಟೆ ಶಿಥಿಲಾವಸ್ಥೆಯಲ್ಲಿದ್ದು, ಅದನ್ನು ನೆಲಸಮಗೊಳಿಸಲು ಪಾಲಿಕೆ ಆದೇಶ ಹೊರಡಿಸಿದೆ. ಅದೇ ಜಾಗದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಿದೆ.
ಬಹುದಿನಗಳಿಂದಲೂ ನನೆಗುದಿಗೆ ಬಿದ್ದಿದ್ದ ದೊಡ್ಡ ಮಾರುಕಟ್ಟೆಯ ಕಟ್ಟಡದ ಕಾಮಗಾರಿ ಆಗಸ್ಟ್- ಸೆಪ್ಟೆಂಬರ್ನಲ್ಲಿ ಪೂರ್ಣಗೊಳಿಸಿ ಬೀದಿ ಬದಿ ಹಾಗೂ ತರಕಾರಿ ಮಾರಾಟಗಾರರ ಸೇವೆಗೆ ಮುಕ್ತ ಮಾಡಲಾಗಿದೆ. ಆದರೆ, ಅದರ ದೊಡ್ಡ ಗುಂಡಿಗಳಿದ್ದು ಮಳೆ ಬಂದರೆ ನೀರು ನಿಂತುಕೊಳ್ಳುತ್ತದೆ. ಅಲ್ಲದೇ, ಮಾರುಕಟ್ಟೆ ತ್ಯಾಜ್ಯ ಕೂಡ ಸೌಂದರ್ಯ ಹಾಳಿಗೆ ಕಾರಣ. ಮಳೆಗಾಲದ ಸಂದರ್ಭದಲ್ಲಿ ಸೊಳ್ಳೆಗಳ ಕಾಟವೂ ಹೇಳತೀರದಾಗಿದ್ದು, ಜನರು ನಾನಾ ರೋಗಗಳ ಭೀತಿಯಲ್ಲಿದ್ದಾರೆ.
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಪಾಲಿಕೆ ಆಯುಕ್ತೆ ಎಂ.ವಿ.ತುಷಾರಮಣಿ, ತೆರಿಗೆ ಹಣವನ್ನು ಸದ್ಬಳಕೆ ಮಾಡಿಕೊಳ್ಳುವುದರಲ್ಲಿ ಪಾಲಿಕೆ ಮುಂದಿದೆ. ದೊಡ್ಡ ಮಾರುಕಟ್ಟೆ ಕಟ್ಟಡ ನಿರ್ಮಿಸಲಾಗಿದೆ. ಸಣ್ಣ ಮಾರುಕಟ್ಟೆಯ ನೆಲಸಮದ ನಂತರ ಹೊಸ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಕೌಲ್ ಬಜಾರ್ ಪ್ರದೇಶ ವ್ಯಾಪ್ತಿಯಲ್ಲೂ ಸುಸಜ್ಜಿತ ಮಾರುಕಟ್ಟೆಯ ಕಟ್ಟಡ ನಿರ್ಮಿಸಲು ಚಿಂತನೆ ಇದೆ. ಅಲ್ಲಿನ ಜಾಗದ ವಿವಾದ ನ್ಯಾಯಾಲಯದಲ್ಲಿ ಇರುವ ಕಾರಣ, ಇತ್ಯರ್ಥವಾದ ಬಳಿಕ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.