ಬಳ್ಳಾರಿ: ಕಳೆದ 14 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲಿ ತುಂಗಭದ್ರಾ ಜಲಾಶಯದಲ್ಲಿ ಬರೋಬ್ಬರಿ 40 ಟಿಎಂಸಿ ನೀರು ಸಂಗ್ರಹಗೊಂಡಿದೆ. ಇದರು ರೈತರಲ್ಲಿ ಆಶಾಭಾವನೆ ಮೂಡಿಸಿರುವುದು ಜೊತೆಗೆ ಹೆಚ್‍ಎಲ್‍ಸಿ ಹಾಗೂ ಎಲ್‍ಎಲ್‍ಸಿ ಕಾಲುವೆಗಳಿಗೆ ನೀರು ಪೂರೈಸಬೇಕೆಂಬ ಒತ್ತಾಯ ವ್ಯಕ್ತವಾಗಿದೆ.
ರೈತರ ಹಿತದೃಷ್ಟಿಯಿಂದ ಇದೇ ಜೂ.20 ರಂದು ತುಂಗಭದ್ರಾ ಜಲಾಶಯದ ಸಲಹಾ ಸಮಿತಿ ಸಭೆ ಕರೆದು ಜೂ.25 ರಂದು ಹೆಚ್‍ಎಲ್‍ಸಿ ಹಾಗೂ ಎಲ್‍ಎಲ್‍ಸಿ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಬೇಕು ಎಂದು ರೈತ ಸಂಘ ಸರ್ಕಾರವನ್ನು ಒತ್ತಾಯಿಸಿದೆ. ಈ ಕುರಿತು ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ, ಕೂಡಲೇ ಕಾಲುವೆಗೆ ನೀರು ಹರಿಸಿದರೆ ಎಲ್ಲ ರೈತರು ಭತ್ತದ ಸಸಿಗಳನ್ನು ಬೆಳೆದು, ಬಳಿಕ ನಾಟಿ ಮಾಡಲು ಅನುಕೂಲವಾಗುತ್ತದೆ. ಇದರಿಂದ ಅದೆಷ್ಟೋ ರೈತರಿಗೆ ಆರ್ಥಿಕವಾಗಿ ತುಂಬಾ ನೆರವಾಗಲಿದೆ ಎಂದರು.
ತುಂಗಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ವಿಜಯನಗರ, ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಲಕ್ಷಾಂತರ ರೈತರು ಭತ್ತ ಬೆಳೆಯುತ್ತಾರೆ. ಪ್ರತಿ ವರ್ಷ ನೀರಿನ ಅಭಾವದಿಂದಾಗಿ ಪಂಪ್‍ಸೆಟ್ ಹೊಂದಿದ ರೈತರ ಹೊಲಗದ್ದೆಗಳಲ್ಲಿ ಭತ್ತದ ಸಸಿಗಳನ್ನು ಬೆಳೆಸಲಾಗುತ್ತಿತ್ತು. ಹೀಗಾಗಿ ರೈತರಿಗೆ ಆರ್ಥಿಕ ಹೊರೆ ಆಗುತ್ತಿತ್ತು.
ಇದೀಗ ಜೂನ್ ಮೊದಲ ವಾರದಲ್ಲೇ ದಾಖಲೆ ಮಟ್ಟದ ನೀರು ಜಲಾಶಯದಲ್ಲಿ ಶೇಖರಣೆಯಾಗಿದೆ. ಆದರೆ, ಜಲಾಶಯದಲ್ಲಿ ನೀರು ತುಂಬಿರುವ ಕುರಿತು ಇದುವರೆಗೆ ಶಾಸಕರಾಗಲಿ, ಸಂಸದರಾಗಲಿ, ಸಚಿವರಾಗಲಿ ರೈತರಿಗೆ ಈ ಬಗ್ಗೆ ಮಾಹಿತಿ ನೀಡದಿರುವುದು ಶೋಚನೀಯ ಎಂದು ಬೇಸರ ವ್ಯಕ್ತಪಡಿಸಿದರು.
1,500 ರೂ. ಉಳಿತಾಯ: ಸದ್ಯ ವರುಣ ಕೃಪೆ ಕೃಷಿಕರ ಮೇಲಾಗಿದ್ದು, ಆದಷ್ಟು ಶೀಘ್ರ ಕಾಲುವೆಗೆ ನೀರು ಹರಿಸಿದಲ್ಲಿ ಪ್ರತಿ ಎಕರೆಗೆ ಏನಿಲ್ಲ ಎಂದರೂ ರೈತರಿಗೆ ತಲಾ 1,500 ರೂ. ಉಳಿತಾಯವಾಗುತ್ತದೆ. ಭತ್ತದ ಸಸಿ ಬೆಳೆದು, ಬಳಿಕ ಭತ್ತ ನಾಟಿ ಮಾಡುವ ರೈತರಿಗೆ ಹಲವು ರೀತಿಯಲ್ಲಿ ಪ್ರಯೋಜನಗಳಿವೆ. ಇದರಿಂದ ಬೇಸಿಗೆಯಲ್ಲೂ ಸಮಸ್ಯೆಯಾಗುವುದಿಲ್ಲ. ಈ ಕುರಿತು ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಪತ್ರ ಸಲ್ಲಿಸಿ ಮನವರಿಕೆ ಮಾಡುವುದಾಗಿ ಅವರು ಹೇಳಿದರು.
ಈ ಕುರಿತು ಕಾಡಾ ಅಧ್ಯಕ್ಷರಿಗೂ ಈಗಾಗಲೇ ಪ್ರಸ್ತಾಪ ಸಲ್ಲಿಸಲಾಗಿದೆ. ಹೆಚ್‍ಎಲ್‍ಸಿ ಮತ್ತು ಎಲ್‍ಎಲ್‍ಸಿ ಕಾಲುವೆಗಳಿಗೆ ನೀರು ಪೂರೈಸುವುದರಿಂದ ರೈತರು ಚಟುವಟಿಕೆಯಿಂದ ಕೃಷಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ನೀರಾವರಿ ಸಚಿವರಿಗೆ ಮತ್ತು ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ ಎಂದೂ ತಿಳಿಸಿದರು.
ಇದನ್ನೂ ಓದಿ: ಪರಿಸರ ನಾವು ರಕ್ಷಿಸಿದರೆ, ಪರಿಸರ ನಮ್ಮನ್ನು ರಕ್ಷಿಸುತ್ತದೆ: ಸಾಲುಮರದ ತಿಮ್ಮಕ್ಕ