ಬಳ್ಳಾರಿ: ಜಿಲ್ಲೆಯ ಕಂಪ್ಲಿ ಪಟ್ಟಣದ ಹೊರವಲಯದಲ್ಲಿರುವ ಸೋಮಪ್ಪ ಕೆರೆಗೆ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಅವರು ಭೇಟಿ ನೀಡಿ ಪರಿಶೀಲಿಸಿದರು. ಕೆರೆಯ ಅಭಿವೃದ್ಧಿ ಕಾರ್ಯದ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ನೇರವಾಗಿ ತೆರಳಿ ಡಿಸಿ ನಕುಲ್ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಹೊಸ ತಾಲೂಕುಗಳಾಗಿ ಘೋಷಣೆಯಾಗಿರುವ ಕಂಪ್ಲಿ ಮತ್ತು ಕುರುಗೋಡು ಭಾಗದಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆಗೆ ಆಗಮಿಸಿದ್ದೇನೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ಅಕ್ರಮ ಸಕ್ರಮ (94ಸಿ ಹಾಗೂ 94ಸಿಸಿ) ಪಟ್ಟಾ ವಿತರಣೆಗೆ ಸಂಬಂಧಿಸಿದಂತೆ ದಾಖಲಾತಿ ಪರಿಶೀಲನೆ ನಡೆಸಲಾಗುವುದು. ತಾಲೂಕು ಕೇಂದ್ರಕ್ಕೆ ಅವಶ್ಯವಿರುವ ಸರ್ಕಾರಿ ಕಚೇರಿಗಳ ಕಟ್ಟಡ ನಿರ್ಮಾಣಕ್ಕೆ ಕಂದಾಯ ಇಲಾಖೆಯಿಂದಲೇ ಜಾಗ ನೀಡಲಾಗುವುದು. ಆದರೆ, ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಈ ವೇಳೆ ತಹಶೀಲ್ದಾರ್ ಎಂ.ರೇಣುಕಾ, ಉಪ ತಹಶೀಲ್ದಾರ್ ಬಿ ರವೀಂದ್ರ ಕುಮಾರ, ಪುರಸಭೆ ಮುಖ್ಯಾಧಿಕಾರಿ ಕೆ ದುರುಗಣ್ಣ, ಪುರಸಭೆ ಅಧ್ಯಕ್ಷ ಎಂ ಸುಧೀರ, ತಾಪಂ ಹಾಗೂ ಪುರಸಭೆ ಕಚೇರಿ ಸಿಬ್ಬಂದಿ ಇದ್ದರು.