ಬಳ್ಳಾರಿ : ಇನ್ಮುಂದೆ ಗಂಗಾ ಕಲ್ಯಾಣ ಯೋಜನೆಯ ಅನುಷ್ಠಾನದ ಉಸ್ತುವಾರಿಯನ್ನ ರೈತನಿಗೇ ನೀಡುವ ಕುರಿತ ಪ್ರಸ್ತಾವನೆಯನ್ನ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅದರ ಅನುಮೋದನೆಗಾಗಿ ನಾವು ಕಾಯುತ್ತಿರೋದಾಗಿ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ರಘು ಕೌಟಿಲ್ಯ ಆಶಾಭಾವನೆ ವ್ಯಕ್ತಪಡಿಸಿದ್ದಾರೆ
ಬಳ್ಳಾರಿಯ ಡಾ.ರಾಜ್ ರಸ್ತೆಯಲ್ಲಿರುವ ಸರ್ಕಾರಿ ಅತಿಥಿ ಗೃಹದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮಗೆ ಎಲ್ಲಿ ಹೋದರೂ ಕೂಡ ಈ ಗಂಗಾ ಕಲ್ಯಾಣ ಯೋಜನೆಯ ಕುರಿತು ಭಾರೀ ಪ್ರಮಾಣದಲ್ಲಿ ಅಪಸ್ವರ ಕೇಳಿ ಬಂದಿದೆ.
ಹೀಗಾಗಿ, ಅದನ್ನ ಸೂಕ್ಷ್ಮವಾಗಿ ಮನಗಂಡು ಅಭಿವೃದ್ಧಿ ನಿಗಮವು ನೇರ ರೈತನಿಗೇ ಗಂಗಾ ಕಲ್ಯಾಣ ಯೋಜನೆಯ ಅನುಷ್ಠಾನದ ಉಸ್ತುವಾರಿ ನೀಡುವ ಕುರಿತಾದ ಪ್ರಸ್ತಾವನೆ ತಯಾರಿಸಿ ಈಗಾಗಲೇ ಸರ್ಕಾರದ ಮುಂದಿಟ್ಟಿರುವೆ. ಅದರ ಅನುಮೋದನೆಯಷ್ಟೇ ಆಗ ಬೇಕಿದೆ ಎಂದರು.
ಗಂಗಾ ಕಲ್ಯಾಣ ಯೋಜನೆಯು ಪಾರದರ್ಶಕವಾಗಿ ನಡೆಯಬೇಕು. ಯಾವುದೇ ಅವ್ಯವಹಾರಕ್ಕೆ ಎಡೆ ಮಾಡಿಕೊಡಬಾರದೆಂಬ ಉದ್ದೇಶದೊಂದಿಗೆ ಈ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಸಾಲ ಮರು ಪಾವತಿಗೆ ವಿನಯ ಪೂರ್ವಕ ಪತ್ರ ಚಳವಳಿ : ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದಲ್ಲಿ ಸಾಲ ಪಡೆದಿರೋ ಅಂದಾಜು 2 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಸ್ವತಃ ನಾನೇ ವಿನಯಪೂರ್ವಕವಾಗಿ ಸಾಲ ಮರುಪಾವತಿಸುವಂತೆ ಕೋರಿ ಪತ್ರ ಬರೆಯಲು ನಿರ್ಧರಿಸಿರುವೆ.
ಅಭಿವೃದ್ಧಿ ನಿಗಮದಲ್ಲಿ ಪಡೆದ ಸಾಲವನ್ನ ಈ ಕೋವಿಡ್ ನೆಪವೊಡ್ಡಿ ಸಾಲ ಮರು ಪಾವತಿಗೆ ಯಾರೊಬ್ಬರೂ ಮುಂದಾಗದ ಕಾರಣ ಮೊದಲ ಹಂತದಲ್ಲಿ ಈ ಪ್ರಯತ್ನಕ್ಕೆ ಮುಂದಾಗಿರುವೆ. ಆದರೆ, ಸಾಲ ಪಡೆದ ಫಲಾನುಭವಿಗಳು ಊಹಾಪೋಹಗಳಿಗೆ ಕಿವಿಗೊಡಬಾರದು ಎಂದರು.
ಸಾಲ ಮನ್ನಾ ಆಗುತ್ತೆ. ಬಾಕಿ ಚುಕ್ತಾ ಆಗುತ್ತೆ ಎಂಬುದೆಲ್ಲವೂ ಶುದ್ಧ ಸುಳ್ಳು. ಯಾಕೆಂದರೆ, ಮೊದಲೇ ಸಬ್ಸಿಡಿ ರೂಪದಲ್ಲಿ ಸಾಲ ಮಂಜೂರಾತಿ ಮಾಡಲಾಗಿದೆ. ಹೀಗಾಗಿ, ಸಾಲ ಪಡೆದವರು ಮರು ಪಾವತಿ ಮಾಡಲೇಬೇಕು. ಇಲ್ಲಾಂದ್ರೆ ನಿಯಮಾನುಸಾರ ಕ್ರಮ ಎದುರಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ಇದಲ್ಲದೇ ಅಂದಾಜು 350 ಕೋಟಿಗೂ ಅಧಿಕ ಮೊತ್ತದ ಸಾಲ ಮರು ಪಾವತಿಯಾಗಬೇಕಿದೆ. ಕೋವಿಡ್ ಸಂದರ್ಭದಲ್ಲಿ ಆ ಸಾಲ ಮರು ಪಾವತಿ ಆಗಿಲ್ಲ. ಇನ್ಮುಂದೆ ಸಾಲ ಮಂಜೂರಾತಿ ಮಾಡ ಬೇಕಾದ್ರೆ ಕಡ್ಡಾಯವಾಗಿ ಈ ಕೌಶಲ ತರಬೇತಿ ಪಡೆಯಲೇಬೇಕೆಂಬ ನಿಯಮವನ್ನ ಜಾರಿಗೆ ತರಲು ನಿರ್ಧರಿಸಲಾಗಿದೆ. ಅಂದಾಗ ಮಾತ್ರ ಈ ಸಾಲಮರು ಪಾವತಿ ಸರಾಗವಾಗಿ ನಡೆಯಲು ಸಾಧ್ಯ ಎಂದರು.