ಬಳ್ಳಾರಿ: ಜಿಲ್ಲೆಯ ಹೊಸಪೇಟೆ ನಗರದ 22ನೇ ವಾರ್ಡಿನ ಗುರುಭವನದ ಹಿಂಭಾಗದಲ್ಲಿನ ಸರಿಸುಮಾರು ಎಂಟು ಗುಡಿಸಲುಗಳಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾದ ಘಟನೆ ನಡೆದಿದೆ.
ಗುಡಿಸಲ್ಲೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಇತರೆ ಗುಡಿಸಲಿಗಳಿಗೆ ಬೆಂಕಿ ಆವರಿಸಿಕೊಂಡಿದೆ. ಆ ಗುಡಿಸಲುಗಳಲ್ಲಿದ್ದ ಗೃಹೋಪಯೋಗಿ ಸಾಮಾಗ್ರಿಗಳು ಸುಟ್ಟು ಕರಕಲಾಗಿವೆ. ಮಾಹಿತಿ ತಿಳಿದ ಕ್ಷಣಾರ್ಧದಲ್ಲೇ ಘಟನಾ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುಡಿಸಲುಗಳಲ್ಲಿ ಸುಮಾರು 15 ಮಂದಿ ನೆಲೆಸಿದ್ದು, ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಗುಡಿಸಲುಗಳಿಂದ ದಿಢೀರನೆ ಹೊರಕ್ಕೆ ಓಡೋಡಿ ಬಂದಿದ್ದಾರೆ. ಆಕಸ್ಮಿಕ ಬೆಂಕಿಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ನಗರಸಭೆ ಆಯುಕ್ತ ವಿ.ರಮೇಶ್ ಮಾತನಾಡಿ, ಸಿಲಿಂಡರ್ ಸ್ಫೋಟದಿಂದ ಗುಡಿಸಲುಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಸರಿಸುಮಾರು 5 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಗುಡಿಸಲಿನಲ್ಲಿ ಕೆಲವರು ಕೂಡಿಟ್ಟಿದ್ದ ಬಿಡಿ ಗಾಸು ಕೂಡ ಸುಟ್ಟು ಕರಕಲಾಗಿವೆ. ಗುಡಿಸಲು ನಿವಾಸಿಗಳಿಗೆ ವಾಸಿಸಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು ತತ್ ಕ್ಷಣವೇ ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು. ಘಟನಾ ಸ್ಥಳಕ್ಕೆ ತಹಸೀಲ್ದಾರ್ ಎಚ್.ವಿಶ್ವನಾಥ, ವಾರ್ಡಿನ ಸದಸ್ಯ ಅಬ್ದುಲ್ ಖದೀರ್ ಭೇಟಿ ನೀಡಿ ಪರಿಶೀಲಿಸಿದರು.