ಬಳ್ಳಾರಿ: ಅನ್ಲಾಕ್ 3.0 ಜಾರಿಗೊಂಡ ಬಳಿಕ ಗಣಿನಾಡಿನ ರೆಸ್ಟೋರೆಂಟ್ಗಳೆಲ್ಲಾ ಗ್ರಾಹಕರಿಲ್ಲದೇ ಬಣಗುಡುತ್ತಿವೆ. ಕೋವಿಡ್ ಸೋಂಕಿನ ಭಯದಿಂದಲೇ ರೆಸ್ಟೋರೆಂಟ್ಗಳತ್ತ ಗ್ರಾಹಕರು ಸುಳಿದಾಡುತ್ತಿಲ್ಲ. ಇದರಿಂದ ಶೇ.60ರಷ್ಟು ಪ್ರಮಾಣದ ವ್ಯವಹಾರ ಕಡಿಮೆಯಾಗಿದೆ.
ಹೌದು, ಅನ್ಲಾಕ್ 3.0 ಜಾರಿಗೊಂಡ ಬಳಿಕ ಜಿಲ್ಲೆಯ ರೆಸ್ಟೋರೆಂಟ್ಗಳ ಮಾಲೀಕರು ವ್ಯವಹಾರ ಯಥಾಸ್ಥಿತಿಗೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಇದರಿಂದ ಆರ್ಥಿಕ ಸಂಕಷ್ಟ ದೂರಾಗಲಿದೆ ಎಂಬೆಲ್ಲಾ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು.
ಆದರೆ ಪ್ರಸ್ತುತ ಸ್ಥಿತಿ ಬೇರೆಯದ್ದೇ ಕಥೆ ಹೇಳುತ್ತಿದ್ದು, ಶೇ 60ರಷ್ಟು ವ್ಯವಹಾರ ಕುಸಿದಿದೆ. ಸದ್ಯ ಆನ್ಲೈನ್ ಮಾರುಕಟ್ಟೆಯಲ್ಲಿ 20 ರಿಂದ 30 ರಷ್ಟು ವ್ಯವಹಾರ ನಡೆಯುತ್ತಿದೆ. ಅದರಲ್ಲೂ ಮಾಂಸಾಹಾರ ಸೇವನೆಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ಶಾಖಾಹಾರ ಪದಾರ್ಥಗಳ ಮಾರಾಟ ಸಹ ಕಡಿಮೆಯಾಗಿದೆ.
ಈ ಕುರಿತಂತೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಪೋಲಾ ರೆಸ್ಟೋರೆಂಟ್ ಮಾಲೀಕ ವಿಕ್ರಮ್ ಪೋಲಾ, ಶೇ. 100ರಷ್ಟು ಬ್ಯುಸಿನೆಸ್ ಇರುವ ನಿರೀಕ್ಷೆಯಲ್ಲಿ ನಾವಂತೂ ಇರಲಿಲ್ಲ. ಅದರ ಅರ್ಧದಷ್ಟು ಬ್ಯುಸಿನೆಸ್ ನಿರೀಕ್ಷೆಯಲ್ಲಿ ನಾವಿದ್ದೆವು. ಆದ್ರೆ, ಅದೆಲ್ಲಾ ಉಲ್ಟಾ ಆಗಿದೆ. ಶೇ. 40ರಷ್ಟು ಮಾತ್ರ ಬ್ಯುಸಿನೆಸ್ ಆಗುತ್ತಿದೆ. ಆನ್ಲೈನ್ ಮಾರುಕಟ್ಟೆಯೂ ಕೂಡ ಮಂದಗತಿಯಲ್ಲಿ ಸಾಗುತ್ತಿದೆ ಎಂದಿದ್ದಾರೆ.
ಈ ಹಿಂದೆ ಐಸ್ ಕ್ರೀಮ್ ಐಟಮ್ಗಳಿಗೆ ಬೇಡಿಕೆ ಇರುತ್ತಿತ್ತು. ಆದರೀಗ ಗಣನೀಯ ಸಂಖ್ಯೆಯಲ್ಲಿ ಬೇಡಿಕೆ ಇಳಿಮುಖವಾಗಿದೆ. ಇನ್ನು ರೆಸ್ಟೋರೆಂಟ್ಗಳತ್ತ ಜನ ಮುಖಮಾಡುತ್ತಿಲ್ಲ. ಹೀಗಾಗಿ ಶೇಕಡಾವಾರು ಬಾಣಸಿಗರು, ಕಾರ್ಮಿಕರನ್ನು ಕಡಿತಗೊಳಿಸಲಾಗಿದೆ. ಜಿಲ್ಲೆಯ ಎಲ್ಲಾ ರೆಸ್ಟೋರೆಂಟ್ಗಳ ಮಾಲೀಕರ ಗೋಳು ಇದಾಗಿದೆ ಎಂದರು.