ಬಳ್ಳಾರಿ: ನಾನು ಮಂತ್ರಿ ಸ್ಥಾನ ಕೇಳಿರಲಿಲ್ಲ. ನನ್ನ ನಿರೀಕ್ಷೆ ಬೇರೆ ಇತ್ತು ಎಂದು ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಪರೋಕ್ಷವಾಗಿ ಉನ್ನತ ಹುದ್ದೆಯ ಆಕಾಂಕ್ಷಿಯಾಗಿದ್ದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತಿಹಾಸ ಪ್ರಸಿದ್ಧ ಹಂಪಿಯ ಮಲಪನ ಗುಡಿ ಮೈದಾನದಲ್ಲಿಂದು ನಡೆದ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಮನೆಗೆ ಬಿಡಲು ಬಂದಿದ್ದ ಸರ್ಕಾರಿ ವಾಹನವನ್ನು ವಾಪಸ್ ಕಳಿಸಿರೋದನ್ನ ಕೆಲ ಮಾಧ್ಯಮಗಳು ತಪ್ಪಾಗಿ ಬಿತ್ತರಿಸಿದ್ದವು.
ಮಂತ್ರಿಗಿರಿ ಪಡೆಯೋದೊಂದೇ ನನ್ನ ಗುರಿಯಾಗಿದ್ದಿಲ್ಲ. ಅದರಾಚೆಗೂ ನನ್ನ ನಿರೀಕ್ಷೆಯಿತ್ತು. ಸಚಿವ ಸಂಪುಟ ವಿಸ್ತರಣೆ ವಿಚಾರ ಸಿಎಂ ಬಿಎಸ್ವೈಗೆ ಬಿಟ್ಟದ್ದು, ಆ ಕುರಿತು ನಾನೇನು ಹೇಳಲಾರೆ. ಒಂದಂತೂ ನಿಜ. ಸಚಿವ ಸಂಪುಟ ವಿಸ್ತರಣೆ ಆಗುವುದು ಮಾತ್ರ ಖಚಿತ. ಅದು ಯಾವಾಗ ಆಗುತ್ತೆ ಎಂದು ಹೇಳುವುದು ಕಷ್ಟ ಎಂದರು. ಬಹುಶಃ ಇದೇ ತಿಂಗಳಲ್ಲಿ ಅಥವಾ ದೆಹಲಿ ಚುನಾವಣೆ ಬಳಿಕ ಸಂಪುಟ ವಿಸ್ತರಣೆ ಆಗಬಹುದು ಎಂದರು.
ಹಂಪಿ ಉತ್ಸವದ ಯಶಸ್ಸಿಗೆ ಸ್ಥಳೀಯರ ಸಹಭಾಗಿತ್ವ ಕೂಡ ಅಗತ್ಯ. ಈ ಉತ್ಸವ ಜನೋತ್ಸವ ಆಗಬೇಕು. ಅದಕ್ಕೆ ಸ್ಥಳೀಯರ ಸಹಭಾಗಿತ್ವ ಬಹುಪಾಲು ಬೇಕಿದೆ. ಹಂಪಿ ಉತ್ಸವಕ್ಕೆ ಅಗತ್ಯ ಅನುದಾನ ಕೂಡ ಮೀಸಲಿರಿಸಲು ನಿರ್ಧರಿಸಲಾಗಿದೆ ಎಂದರು.