ಬಳ್ಳಾರಿ: ಅಧಿಕಾರದ ಆಸೆಗಾಗಿ ಮೈತ್ರಿ ಸರ್ಕಾರದ ಶಾಸಕರಿಗೆ ಹಣದ ಆಮಿಷವೊಡ್ಡಿ ತಮ್ಮತ್ತ ಸೆಳೆದುಕೊಂಡಿರುವ ಬಿಜೆಪಿ ನಡೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ನ ಅತೃಪ್ತ ಶಾಸಕರನ್ನು ಬಿಜೆಪಿಯವರು ತಮ್ಮತ್ತ ಸೆಳೆಯಲು ತಲಾ ₹ 50 ಕೋಟಿ ನೀಡಿದ್ದಾರೆ. ಶಾಸಕರಿಗಾಗಿ ಕೊಟ್ಯಂತರ ಹಣವನ್ನು ಸುರಿಯುವ ಮುಖೇನ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ದೊಡ್ಡ ಷಡ್ಯಂತ್ರ ನಡೆಸಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಹೆಚ್.ಅನಿಲ್ ಲಾಡ್, ಅತೃಪ್ತ ಶಾಸಕರಿಗಾಗಿ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿರುವ ಬಿಜೆಪಿ, ಅಧಿಕಾರದ ಆಸೆಗಾಗಿ ಒಂದೂವರೆ ವರ್ಷದಿಂದ ಸುಸ್ರೂತವಾಗಿ ಮುಂದುವರಿಯುತ್ತಿದ್ದ ಮೈತ್ರಿ ಸರ್ಕಾರವನ್ನು ಕೆಡವಲು ಮುಂದಾಗಿದ್ದಲ್ಲದೇ, ಅತೃಪ್ತರನ್ನು ಮುಂಬೈನ ಹೋಟೆಲ್‌ನಲ್ಲಿಟ್ಟು ಕಾವಲು ಕಾಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕ ಡಿಕೆಶಿ ಶಿವಕುಮಾರ್ ಅವರು ಶಾಸಕರನ್ನು ಮಾತನಾಡಿಸಲೂ ಅಲ್ಲಿನ ಪೊಲೀಸರು ಅನುಮತಿ ನೀಡಲಿಲ್ಲ. ಪ್ರಸ್ತುತ ರಾಜ್ಯ ರಾಜಕೀಯ ಬೆಳವಣಿಗೆ ಕಂಡರೆ ಅಸಹ್ಯ ಅನಿಸುತ್ತದೆ. ರಾಜೀನಾಮೆ ನೀಡಿರುವ ಶಾಸಕರಿಗೆ ತಾಯಿ ಪಕ್ಷದಲ್ಲಿ ಸಿಗುವ ಗೌರವ ಬೇರೆ ಪಕ್ಷದಲ್ಲಿ ಸಿಗುವುದಿಲ್ಲ ಎಂದು ಮತ್ತೆ ಪಕ್ಷಕ್ಕೆ ಮರಳುವಂತೆ ಮನವಿ ಮಾಡಿಕೊಂಡರು.
ಆನಂದ ಸಿಂಗ್ ಅವರ ರಾಜೀನಾಮೆ ಹಾಗೂ ಗೈರಾಗಿರುವುದರ ಬಗ್ಗೆ ಮಾತನಾಡುವುದಿಲ್ಲ. ಎಲ್ಲ ರಂಗದಲ್ಲಿ ಒಳ್ಳೆಯವರು, ಕೆಟ್ಟವರೂ ಇದ್ದಾರೆ. ನಮ್ಮ ಘಟಾನುಘಟಿ ನಾಯಕರು ಇಂದು ಬಿಜೆಪಿಗೆ ಹೋಗಿದ್ದಾರೆ. ಆದರೆ ಸ್ಪೀಕರ್ ರಮೇಶ್ ಕುಮಾರ್ ಅವರಿಗೂ ಹಣ ಕೊಟ್ಟಿದ್ದಾರೆ ಅಂತ ಆರೋಪ ಮಾಡುತ್ತಿರುವುದು ಸರಿಯಲ್ಲ. ಸರ್ಕಾರದ ಬಹುಮತ ಸಾಬೀತು ವಿಚಾರದಲ್ಲಿ ರಾಜ್ಯಪಾಲರ ನಡೆ ಅವರ ಹುದ್ದೆಗೆ ಗೌರವ ತಂದುಕೊಡಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿರುವುದನ್ನು ಸೂಚಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.