ಬಳ್ಳಾರಿ: ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಆತಂಕಕಾರಿ ಘಟನೆ ಬಳ್ಳಾರಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಬಳ್ಳಾರಿ ಮಹಿಳಾ ಠಾಣೆಯಲ್ಲಿ ನಾಲ್ವರ ವಿರುದ್ಧ ಸಂತ್ರಸ್ತ ಯುವತಿಯ ತಂದೆ ದೂರು ದಾಖಲಿಸಿದ್ದಾರೆ. ಬಳ್ಳಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಮುಖ ಆರೋಪಿ ನವೀನ್ ಎಂಬಾತನನ್ನು ಬಂಧಿಸಿ, ಉಳಿದವರಿಗಾಗಿ ಬಲೆ ಬೀಸಿದ್ದಾರೆ.
ಸಂತ್ರಸ್ತ ಯುವತಿ ಬಳ್ಳಾರಿ ಕಾಲೇಜೊಂದರಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಅಕ್ಟೋಬರ್ 11 ರಂದು ಕಾಲೇಜಿನಲ್ಲಿ ಪರೀಕ್ಷೆ ಬರೆಯುತ್ತಿದ್ದ ವೇಳೆ ನಿಮ್ಮ ಅಣ್ಣ ಬಂದಿದ್ದಾನೆ ಎಂದು ಸುಳ್ಳು ಹೇಳಿ ಪರೀಕ್ಷಾ ಕೊಠಡಿಯಿಂದ ಯುವತಿಯನ್ನು ಹೊರಗೆ ಕರೆಯಿಸಿ ಬಳಿಕ ಆಟೋದಲ್ಲಿ ನಾಲ್ವರು ಯುವಕರು ಅಪಹರಿಸಿದ್ದರು. ನಂತರ ಆಟೋದಲ್ಲೇ ಯುವತಿಗೆ ಮದ್ಯ ಕುಡಿಸಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಣಾಪುರ ಬಳಿಯ ಹೋಟೆಲ್ವೊಂದಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ದಾಖಲಾಗಿದೆ. ಅತ್ಯಾಚಾರ ಎಸಗಿದ ಆರೋಪಿಗಳು ಸಂತ್ರಸ್ತೆಗೆ ಪರಿಚಿತರಾಗಿದ್ದರು ಎಂದು ತಿಳಿದು ಬಂದಿದೆ.
ಕೌಲ್ ಬಜಾರ್ ನಿವಾಸಿಗಳಾದ ನವೀನ್, ತನ್ನು, ಶಕೀಬ್ ಸೇರಿದಂತೆ ನಾಲ್ವರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ದೂರು ದಾಖಲಾಗಿದೆ. ಆರೋಪಿಗಳ ವಿರುದ್ಧ ಬಳ್ಳಾರಿ ಮಹಿಳಾ ಠಾಣೆಯಲ್ಲಿ ಐಪಿಸಿ 341, 366, 342, 376, 114, 34 ಸೆಕ್ಷನ್ ಅಡಿ ಅತ್ಯಾಚಾರ, ಅಪಹರಣ ದೂರು ದಾಖಲಿಸಲಾಗಿದೆ. ಪೊಲೀಸರ ಸಂಪೂರ್ಣ ತನಿಖೆ ಬಳಿಕ ಪ್ರಕರಣದ ಎಲ್ಲ ಸತ್ಯಾಸತ್ಯತೆ ಬಯಲಿಗೆ ಬರಲಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಪ್ರಮುಖ ಆರೋಪಿಯನ್ನು ಬಂಧಿಸಿದ್ದೇವೆ. ಇನ್ನುಳಿದ ಮೂವರ ಬಂಧನಕ್ಕಾಗಿ ಹುಡುಕಾಟ ನಡೆದಿದೆ ಎಂದು ತಿಳಿಸಿದರು.
21 ವರ್ಷದ ಬಿಕಾಂ ವಿದ್ಯಾರ್ಥಿನಿ ಅಕ್ಟೋಬರ್ 11 ರಂದು ಕಾಲೇಜಿನಲ್ಲಿ ಪರೀಕ್ಷೆ ಬರೆಯುತ್ತಿದ್ದರು. ಈ ವೇಳೆ ನಿಮ್ಮ ಅಣ್ಣ ಬಂದಿದ್ದಾನೆ ಎಂದು ಸುಳ್ಳು ಹೇಳಿ ಪರಿಚಿತ ಯುವಕನೋರ್ವ ಹೊರಗೆ ಕರೆಸಿ ಬಳಿಕ ಆಟೋದಲ್ಲಿ ಬಲವಂತವಾಗಿ ಸಣಾಪುರಕ್ಕೆ ಕರೆದುಕೊಂಡು ಹೋಗಿದ್ದರು. ನಂತರ ಅಲ್ಲಿನ ಹೋಟೆಲ್ನಲ್ಲಿ ರೂಂ ಬುಕ್ ಮಾಡಿ ಅತ್ಯಾಚಾರ ಎಸಗಿದ್ದಾರೆ. ಆರೋಪಿಗಳೆಲ್ಲ ಬಳ್ಳಾರಿ ಮೂಲದವರಾಗಿದ್ದಾರೆ.ಈಗಾಗಲೇ ಎ1 ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಂಗೀಯ ಕಸ್ಟಡಿಗೆ ನೀಡಲಾಗಿದೆ. ಉಳಿದವರನ್ನು ಆದಷ್ಟು ಬೇಗ ಬಂಧಿಸುತ್ತೇವೆ - ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್.
ಇದನ್ನೂ ಓದಿ: 190ಕ್ಕೂ ಹೆಚ್ಚು ಮಕ್ಕಳನ್ನು ಬಲಿ ಪಡೆದಿದ್ದ ಸರಣಿ ಹಂತಕ ಸಾವು