ಬಳ್ಳಾರಿ: ಭ್ರಷ್ಟಾಚಾರದ ದೊಡ್ಡ ರಾಯಭಾರಿ ಎಂದರೇ ಕಾಂಗ್ರೆಸ್, ಕಾಂಗ್ರೆಸ್ ನಾಯಕರ ಡಿಎನ್‌ಎದಲ್ಲಿ ಭ್ರಷ್ಟಾಚಾರ ಇದೆ. ಕಾಂಗ್ರೆಸ್ ನಾಯಕರ ಡಿಎನ್‌ಎ ಟೆಸ್ಟ್ ಮಾಡಿದರೆ ಭ್ರಷ್ಟಾಚಾರ ಗೊತ್ತಾಗುತ್ತದೆ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾದ ಬಿ. ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಳ್ಳಾರಿ ನಗರದಲ್ಲಿ ನಡೆದ 74ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಧ್ವಜಾರೋಹಣ ಮಾಡಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ನಾಯಕರ ಬಾಯಲ್ಲಿ ಭ್ರಷ್ಟಾಚಾರದ ಮಾತು, ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಕೇಳಿಸುತ್ತದೆ. ಸಿಎಂ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ನಾಯಕರಿಗಿಲ್ಲ, ಕಾಂಗ್ರೆಸ್ ನಾಯಕರು ಮತ್ತು ಪಕ್ಷ ನೈತಿಕವಾಗಿ ದಿವಾಳಿಯಾಗಿದೆ ಎಂದು ಶ್ರೀರಾಮುಲು ಹೇಳಿದರು.
ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಅಷ್ಟು ಸುಲಭವಲ್ಲ, ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಇಲ್ಲ ಎಂದೂ, ಅದರ ಮುಂಚೂಣಿ ನಾಯಕರಲ್ಲಿ ಒಗ್ಗಟಿದೆ ಎಂದೂ ಹೇಳಲಾಗುತ್ತಿದೆ. ಆದರೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ದೋಸ್ತಿ ಅಸಲಿ ಬಣ್ಣ ಶೀಘ್ರದಲ್ಲಿ ಬಯಲಾಗಲಿದೆ. ಮುಂದಿನ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸೋಲಿನ ಭೀತಿ ಕಾಡುತ್ತಿದೆ. ಅವರು ಮುಂದೆ ಕೋಲಾರವನ್ನು ಬಿಡಲಿದ್ದಾರೆ ಎಂದು ಶ್ರೀರಾಮುಲು ಭವಿಷ್ಯ ನುಡಿದರು.
ಪಕ್ಷ ನಿರ್ಧರಿಸುವ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ: ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಪ್ರಯತ್ನಿಸಲಾಗಿದೆ. ಆದರೆ ಒಂದು ವರ್ಷ ಮುಂಚೆಯೇ ಜಿಲ್ಲಾ ಉಸ್ತುವಾರಿ ಅವಕಾಶ ಸಿಕ್ಕಿದ್ದರೇ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡಲಾಗುತ್ತಿತ್ತು .ಈ ಬಾರಿ ಬಳ್ಳಾರಿ ಜಿಲ್ಲೆಯಿಂದಲೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಬಳ್ಳಾರಿ ಗ್ರಾಮೀಣ ಅಥವಾ ಸಂಡೂರಿನಲ್ಲಿ ಸ್ಪರ್ಧಿಸುವ ಇಚ್ಛೆಯಿದ್ದೂ, ಪಕ್ಷ ಎಲ್ಲಿ ಹೇಳುತ್ತದೋ ಆ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದೂ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ 63 ಹೊಸಪೇಟೆಯಿಂದ ಬಳ್ಳಾರಿ ರಸ್ತೆ ಅಭಿವೃದ್ದಿಗೆ ಒಂದು ಸಾವಿರ ಕೋಟಿ ಮರು ಟೆಂಡರ್ ಕರೆಯಲಾಗಿದೆ. ಈ ಹಿಂದೆ ಗ್ಯಾಮನ್ ಇಂಡಿಯಾ ಈ ಕಾಮಗಾರಿ ಮಾಡುತ್ತಿತ್ತು. ಬಾಕಿ ಉಳಿದ ಕಾಮಗಾರಿ ಪೂರ್ಣಗೊಳಿಸಲು ಟೆಂಡರ್ ಕರೆಯಲಾಗಿದ್ದು, ಒಂದು ವರ್ಷದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲು ಚಿಂತನೆ ನಡೆಸಲಾಗಿದೆ. ಹಾಗೇಯೇ, ಬಳ್ಳಾರಿ ಬೈಪಾಸ್ ಕಾಮಗಾರಿ ನಿರ್ಮಾಣಕ್ಕೆ 900 ಕೋಟಿ ರೂ. ಗಳ ಟೆಂಡರ್ ಕರೆಯಲಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಶೇ.50ರಷ್ಟು ಕಾಮಗಾರಿ ಪೂರ್ಣವಾಗಲಿವೆ ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
150 ಅಡಿ ಎತ್ತರ ಬೃಹತ್ ಧ್ವಜ ಸ್ತಂಭದ ಮೇಲೆ ಧ್ವಜಾರೋಹಣ: 74ನೇ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಬಳ್ಳಾರಿ ನಗರದ ಎಚ್. ಆರ್. ಗವಿಯಪ್ಪ ವೃತ್ತದಲ್ಲಿ 150 ಅಡಿ ಎತ್ತರ ಬೃಹತ್ ಧ್ವಜ ಸ್ತಂಭದ ಮೇಲೆ ಧ್ವಜಾರೋಹಣವನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಧ್ವಜಾರೋಹಣ ಮಾಡಿದರು. ಬಳಿಕ ಪೊಲೀಸ್ ಇಲಾಖೆ ಸೇರಿದಂತೆ ಒಟ್ಟು 30 ತುಕಡಿಗಳ ಪಥ ಸಂಚಲನ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸಚಿವ ಬಿ. ಶ್ರೀರಾಮುಲು ಅವರು ಸನ್ಮಾನಿಸಿದರು.
ಇದನ್ನೂ ಓದಿ: ದೆಹಲಿ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಗಮನಸೆಳೆದ 'ಕರ್ನಾಟಕದ ನಾರಿಶಕ್ತಿ'- ವಿಡಿಯೋ