ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೊರೊನಾ ಸೋಂಕಿತನೋರ್ವನಿಗೆ ಉಸಿರಾಟದ ತೊಂದರೆ ಹೆಚ್ಚಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆಂದು ಕೂಡ್ಲಿಗಿಯಿಂದ ಬಳ್ಳಾರಿಗೆ ಆಂಬ್ಯುಲೆನ್ಸ್ನಲ್ಲಿ ಕರೆದೊಯ್ಯುವ ವೇಳೆ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾರೆ.
ಉಜ್ಜಿನಿ ಗ್ರಾಮದ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದು, ಇವರಿಗೆ ಕಳೆದ ನಾಲ್ಕೈದು ದಿನಗಳ ಹಿಂದಷ್ಟೇ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಹೃದಯ ಸಂಬಂಧಿ ಸಮಸ್ಯೆ, ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಈತನನ್ನು ಕಳೆದ ಎರಡು ದಿನದ ಹಿಂದೆ ಕೂಡ್ಲಿಗಿ ಕೋವಿಡ್ ವಾರ್ಡ್ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ಆದರೆ ಮೊನ್ನೆ ನಡುರಾತ್ರಿ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಇವರನ್ನು ಕೂಡ್ಲಿಗಿ ಸರ್ಕಾರಿ ಆಂಬ್ಯುಲೆನ್ಸ್ನಲ್ಲಿ ಬಳ್ಳಾರಿಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯುವಾಗ ರಾಂಪುರ ಸಮೀಪ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾರೆ. ಆ ವ್ಯಕ್ತಿಯ ಶವವನ್ನು ವೈದ್ಯರ ಸಲಹೆ ಮೇರೆಗೆ ಕೂಡ್ಲಿಗಿಗೆ ವಾಪಸ್ ತಂದು ಶವಾಗಾರದಲ್ಲಿರಿಸಿ, ನಿನ್ನೆ ಬೆಳಗ್ಗೆ ಆರೋಗ್ಯ ಇಲಾಖೆ ಸಿಬ್ಬಂದಿ ಪಿಪಿಇ ಕಿಟ್ ಧರಿಸಿ ಮೃತನ ಕುಟುಂಬದವರು ಹೇಳಿದ ಸ್ಥಳದಲ್ಲಿಯೇ ಅಂತ್ಯ ಸಂಸ್ಕಾರ ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ಖಚಿತಪಡಿಸಿವೆ.