ಬಳ್ಳಾರಿ: ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ - ರಾಜ್ಯ ಸರ್ಕಾರಗಳು ನಿರಂತರ ಹೋರಾಟ ನಡೆಸುತ್ತಿವೆ. ಇಂತಹ ಸಂದರ್ಭದಲ್ಲಿ ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು (ರಾಬಕೋ) 10ಲಕ್ಷ ರೂ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದೆ ಎಂದು ರಾಬಕೋ ಹಾಲು ಮಹಾ ಮಂಡಳಿ ಅಧ್ಯಕ್ಷರೂ, ಶಾಸಕ ಎಲ್.ಬಿ.ಪಿ.ಭೀಮಾನಾಯ್ಕ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಸೋಂಕಿನ ಪರಿಣಾಮದಿಂದಾಗಿ ಕರ್ನಾಟಕ ಮತ್ತು ದೇಶ ಆರ್ಥಿಕ ತುರ್ತು ಪರಿಸ್ಥಿತಿಯಲ್ಲಿದ್ದು, ನಾಗರಿಕರ ಜೀವ ರಕ್ಷಣೆಗಾಗಿ ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಜೊತೆ ಸಹಕಾರಿ ಕ್ಷೇತ್ರವು ಕೂಡ ಕೈ ಜೋಡಿಸುವುದು ಹೊಣೆಗಾರಿಕೆಯಾಗಿರುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಆರ್ಥಿಕವಾಗಿ ನೆರವಾಗುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂಬುದನ್ನು ಅರಿತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10ಲಕ್ಷ ರೂ. ಜಮೆ ಮಾಡಲಾಗಿದೆ ಎಂದಿದ್ದಾರೆ.
ಇದಿಷ್ಟೇ ಅಲ್ಲದೇ ಆರ್ಥಿಕವಾಗಿ ಸರ್ಕಾರಕ್ಕೆ ನೆರವಾಗುವ ದೃಷ್ಟಿಯಿಂದ ರಾಬಕೋ ಧರ್ಮಾರ್ಥ ನಿಧಿಯಿಂದ 7,41587 ರೂ. ಒಕ್ಕೂಟದ ಅಧಿಕಾರಿ ಮತ್ತು ಸಿಬ್ಬಂದಿ ಒಂದು ದಿನದ ವೇತನ 2,20,373. ರೂ. ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರ ಪ್ರವಾಸ ಭತ್ಯೆ ಹಾಗೂ ದಿನ ಭತ್ಯೆ 38,040.00 ರೂ. ಸೇರಿದಂತೆ ಒಟ್ಟು 10ಲಕ್ಷ ರೂ.ಗಳ ಆರ್ಥಿಕ ನೆರವು ನೀಡಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.