ಬಳ್ಳಾರಿ: ಜಿಂದಾಲ್ ಸಮೂಹ ಸಂಸ್ಥೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದರೆ ಸೂಕ್ತ ಕ್ರಮ ಜರುಗಿಸದೇ ನಾನಂತೂ ಸುಮ್ಮನೆ ಕೂರಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂಪನಿಯ ಕುರಿತು ರಾಜ್ಯ ಸರ್ಕಾರವಾಗಲಿ ಅಥವಾ ನಾನಾಗಲಿ ಮೃದುಧೋರಣೆ ತಾಳಿಲ್ಲ. ಮುಂದೆಯೂ ತಾಳಲ್ಲ. ಮೈತ್ರಿ ಸರ್ಕಾರದ ಅವಧಿಯಲ್ಲೂ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ಆಗಲೂ ನಾನೇ ಜಿಂದಾಲ್ ವಿರುದ್ಧ ಧ್ವನಿ ಎತ್ತಿದ್ದೆ. ಈಗಲೂ ಅಂಥಹದ್ದೇ ನಿಲುವು ತಾಳಿರುವೆ ಎಂದು ಸ್ಪಷ್ಟಪಡಿಸಿದರು.
ಜಿಂದಾಲ್ನ ನಿರ್ಬಂಧಿತ ಪ್ರದೇಶದಲ್ಲಿ ಎಷ್ಟು ಮಂದಿ ವಾಸವಿದ್ದಾರೆ ಎಂಬ ಮಾಹಿತಿ ನನಗೆ ಬೇಕು. ಅವರ ಮೂಲ ಯಾವುದು? ಹಾಗೂ ಕಂಪನಿಯಲ್ಲಿ ಎಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆಂಬ ಮಾಹಿತಿಯನ್ನು ಎರಡು ದಿನಗಳಲ್ಲಿ ನೀಡಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರಿಗೆ ಆನಂದ ಸಿಂಗ್ ಸೂಚಿಸಿದರು.
ಸಕಾಲದಲ್ಲಿ ಮಾಹಿತಿ ಒದಗಿಸಿ
ಮಾಧ್ಯಮದವರಿಗೆ ಸಕಾಲದಲ್ಲಿ ಕೊರೊನಾ ಸೋಂಕಿನ ಎಲ್ಲ ಮಾಹಿತಿಯನ್ನು ಒದಗಿಸಬೇಕು. ಏಕಂದರೆ ಪ್ರತಿ ಅಪ್ಡೇಟ್ ಅನ್ನು ಈ ರಾಜ್ಯದ ಜನರು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ನಿಮಗೆಷ್ಟು ಒತ್ತಡ ಇರುತ್ತೋ ಅವರಿಗೂ ಕೂಡ ಒತ್ತಡ ಇರುತ್ತೆ. ಹೀಗಾಗಿ, ಅವರಿಗೆ ಏನಿದೆಯೋ ಆ ಮಾಹಿತಿಯನ್ನ ಕೊಟ್ಟು ಬಿಡಿ ಎಂದು ಜಿಲ್ಲಾಧಿಕಾರಿಗೆ ಸಚಿವರು ತಾಕೀತು ಮಾಡಿದರು.