ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿ ಸೋಮವಾರ ಸಂಜೆ ಭಾರೀ ಮಳೆಯಾಗಿ ಮಸೀದಿ ಸೇರಿದಂತೆ 4 ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಅವರ ಕುಟುಂಬಗಳ ಬದುಕು ಬೀದಿಗೆ ಬಂದಿರುವ ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿಯ ನೀರು ರಸ್ತೆಯನ್ನು ಕೊರೆದು ಊರೊಳಗೆ ನುಗ್ಗುತ್ತಿರುವುದರಿಂದ ಈ ಅನಾಹುತ ಸೃಷ್ಟಿಯಾಗಿದ್ದು, ಸ್ಥಳೀಯ ಆಡಳಿತ ನೀರು ಮನೆಯೊಳಗೆ ನುಗ್ಗದಂತೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಇಲ್ಲಿಯ ಜನರು ಆರೋಪಿಸಿದ್ದಾರೆ. ರಹಿಮಾನ್ ಸಾಬ್ ಎನ್ನುವ ವ್ಯಕ್ತಿಯ ಮನೆಗೆ ನೀರು ನುಗ್ಗಿದ್ದರಿಂದ ಈತ ಮನೆ ತೊರೆದು ಊರ ಹೊರವಲಯದ ರಾಜಾಸಾಬ್ ಅವರ ಕೋಳಿ ಫಾರಂನಲ್ಲಿ ವಾಸಿಸಲು ರಾತ್ರೋರಾತ್ರಿ ಮುಂದಾಗಿದ್ದಾರೆ.
ಇನ್ನು ರಮೀಜಾಬೀ, ಅಲ್ಲಾಭಕ್ಷಿ ಪುಟ್ಟಲ್ಲ ಎಂಬುವವರು ಪಕ್ಕದ ಸಂಬಂಧಿಕರ ಮನೆಗಳಲ್ಲಿ ಹೋಗಿ ವಾಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಾಲ್ವರ ಮನೆಗಳಲ್ಲಿ ಜೋಳ, ಅಕ್ಕಿ ಸೇರಿದಂತೆ ಜೀವನಾವಶ್ಯಕ ವಸ್ತುಗಳು ನೀರು ಪಾಲಾಗಿದ್ದು, ಇವರ ಬದುಕು ಬೀದಿಗೆ ಬಿದ್ದಿದೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾಡಿದ್ದು, ಮಸೀದಿ ಹತ್ತಿರ ಎತ್ತರವಾಗಿ ಮಣ್ಣಿನ ಗುಡ್ಡೆ ಹಾಕಿದ್ದಾರೆ. ಇದನ್ನು ತೆಗೆದರೆ ಮಸೀದಿ ಹಾಗೂ ಮೂರು ಮನೆಗಳಿಗೆ ನೀರು ನುಗ್ಗುವುದು ತಪ್ಪುತ್ತದೆ. ಇದಕ್ಕೆ ಸಂಬಂಧಿಸಿಂದತೆ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಕೇಳಿದರೆ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೂಡ್ಲಿಗಿ ತಾಲೂಕಿನ ಮಳೆ ಪ್ರಮಾಣ :
ಹೊಸಳ್ಳಿ : 45.2 ಮಿ.ಮೀ
ಬಣವಿಕಲ್ಲು : 21.2 ಮಿ.ಮೀ
ಸಿ.ಜೆ ಹಳ್ಳಿ : 37.2 ಮಿ.ಮೀ
ಕೊಟ್ಟೂರು : 11.8 ಮಿ.ಮೀ
ಕೂಡ್ಲಿಗಿ : 15 ಮಿ.ಮೀ
ಗುಡೇಕೋಟೆ :5.3 ಮಿ.ಮೀ
ಇನ್ನು ಕೂಡ್ಲಿಗಿ ತಾಲೂಕಿನ ತಹಶೀಲ್ದಾರ್ ಮಹಾಬಲೇಶ್ವರ ಮಳೆ ನೀರು ನುಗ್ಗಿದ ಮನೆಗಳಿಗೆ ಭೇಟಿ ನೀಡಿ ಪರೀಶಿಲನೆ ನಡೆಸಿ ಅದನ್ನು ಬಗೆಹರಿಸುವ ಪ್ರಯತ್ನ ಮಾಡಿದ್ದಾರೆ.