ಬಳ್ಳಾರಿ: ಮುಂಡರಗಿ ಬಡಾವಣೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ತ್ರಿಪುರ ಮಾದರಿಯಲ್ಲೇ ಮನೆಗಳ ನಿರ್ಮಾಣ ಕಾರ್ಯಕ್ಕೆ ಈಗಾಗಲೇ ಸಕಲ ತಯಾರಿ ಮಾಡಿಕೊಂಡಿದ್ದು, ಫೆ. 25ರಂದು ಆ ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗಮಿಸುವ ಸಾಧ್ಯತೆಯಿದೆ ಎಂದು ಜಿಲ್ಲಾಧಿಕಾರಿ ಡಾ. ವಿ.ರಾಮಪ್ರಸಾತ್ ಮನೋಹರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಡರಗಿ ಬಡಾವಣೆಯಲ್ಲಿ ಮೊದಲ ಹಂತದಲ್ಲಿ 5,500 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಈ ಪೈಕಿ ಈಗಾಗಲೇ 2,500ಕ್ಕೂ ಹೆಚ್ಚು ಫಲಾನುಭವಿಗಳು ತಮ್ಮ ಪಾಲಿನ ಕಂತಿನ ಹಣವನ್ನು ಪಾವತಿಸಿದ್ದಾರೆ ಎಂದರು.
ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಚರಂಡಿ, ರಸ್ತೆ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ. 2 ವರ್ಷದಲ್ಲಿ ಮಾದರಿ ಮನೆಗಳ ನಿರ್ಮಾಣಕ್ಕೆ ಕಾಲಾವಕಾಶ ನೀಡಲಾಗಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಮಾದರಿ ಮನೆಗಳನ್ನು ನಿರ್ಮಿಸುವುದರ ಜತೆಗೆ ಅಲ್ಲಿ ವಾಸಿಸುವ ನಿವಾಸಿಗಳಿಗೆ ‘ವಾಕ್ ಟು ವರ್ಕ್’ ಎಂಬ ಹೆಸರಿನಡಿ ಉದ್ಯೋಗ ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಸುಮಾರು 40 ಎಕರೆ ಪ್ರದೇಶದಲ್ಲಿ ಜೀನ್ಸ್ ಸ್ಟಿಚಿಂಗ್ ಇಂಡಸ್ಟ್ರೀಸ್ ಆರಂಭಿಸಲಾಗುತ್ತಿದೆ. ಇಚ್ಛಾಶಕ್ತಿ, ಆಸಕ್ತಿಯುಳ್ಳ ಉದ್ಯಮಿಗಳಿಂದ 150 ಘಟಕಗಳನ್ನು ಆರಂಭಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಇದರಿಂದ ಸುಮಾರು 15 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದಂತಾಗುತ್ತದೆ. ಮಾದರಿ ಮನೆಗಳ ಬಗ್ಗೆ ರಾಜ್ಯ ಸೇರಿ ರಾಷ್ಟ್ರ ಮಟ್ಟದಲ್ಲಿ ಉತ್ತಮ ಸ್ಪಂದನೆ ಜಿಲ್ಲೆಗೆ ದೊರಕಿದೆ ಎಂದರು.