ಹೊಸಪೇಟೆ (ವಿಜಯನಗರ): ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಕೊರೊನಾ ತಡೆಗಟ್ಟಲು ಗ್ರಾಮ ಪಂಚಾಯಿತಿ ಸಿಬ್ಬಂದಿ ಮತ್ತು ಗ್ರಾಮಸ್ಥರು ಹೊಸ ಪ್ರಯತ್ನ ಮಾಡಿದ್ದಾರೆ. ಗ್ರಾಮದ ಸುತ್ತಲೂ ನಾಲ್ಕು ಚೆಕ್ ಪೋಸ್ಟ್ ನಿರ್ಮಿಸಿ ಕೊರೊನಾ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಈ ಮೂಲಕ ಸುಖಾ ಸುಮ್ಮನೆ ಗ್ರಾಮಕ್ಕೆ ಬರುವವರನ್ನು ಮುಲಾಜಿಲ್ಲದೇ ವಾಪಸ್ ಕಳುಹಿಸಲಾಗುತ್ತಿದೆ.
ಗ್ರಾಮಕ್ಕೆ ಭೇಟಿ ನೀಡಿವ ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ನಾಗೇನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎರಡು ಹಳ್ಳಿಗಳಲ್ಲಿ ಇದುವರೆಗೆ ಒಂದೇ ಒಂದು ಪಾಸಿಟಿವ್ ಪ್ರಕರಣವೂ ಪತ್ತೆಯಾಗಿಲ್ಲ. ಇದುವರೆಗೆ ಈ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್‌ನಿಂದ ಯಾವುದೇ ಸಾವುಗಳು ಸಂಭವಿಸಿಲ್ಲ. ಈವರೆಗೆ 28 ಪಾಸಿಟಿವ್ ಕೇಸ್ಗಳು ಕಂಡು ಬಂದಿದ್ದವು. ಈಗ 10-12 ಸಕ್ರೀಯ ಪ್ರಕರಣಗಳಿವೆ. ಕೊರೊನಾ ಹೆಚ್ಚಾಗಬಾರದೆಂದು ಗ್ರಾ.ಪಂ. ಈ ತೀರ್ಮಾನ ಮಾಡಿದ್ದು, ಗ್ರಾ.ಪಂ. ಸಿಬ್ಬಂದಿಯನ್ನೇ ತಪಾಸಣೆಗೆ ನೇಮಕ ಮಾಡಿ, ಕೊರೊನಾ ಕಂಟ್ರೋಲ್ ಗೆ ಮುಂದಾಗಿದೆ.
ಗ್ರಾಮ ಪಂಚಾಯತಿ ಅಧ್ಯಕ್ಷೆ ಹುಲಿಗೆಮ್ಮ ಮಾತನಾಡಿ, ಗ್ರಾಮದಲ್ಲಿ ನಿರಂತರವಾಗಿ ಕೊರೊನಾ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಊರಿಂದ ಹೊರಗಡೆ ಹಾಗೂ ಹೊರಗಡೆಯಿಂದ ಊರೊಳಗೆ ಯಾರೂ ಬರಬಾರದು ಎಂದು ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಪ್ರತಿಯೊಬ್ಬರ ವಾಹನದ ಸಂಖ್ಯೆ ಹಾಗೂ ಮೊಬೈಲ್ ನಂಬರ್ ಬರೆದುಕೊಂಡು ಓಡಾಡುವುದಕ್ಕೆ ಅನಕೂಲ ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.