ಹೊಸಪೇಟೆ : ಆರ್.ಆರ್.ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಸ್ವಪಕ್ಷದವರೆ ಮುಂದೆ ನಿಲ್ಲುವ ಮೂಲಕ ಸಂಸದ ಸುರೇಶ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಷಡ್ಯಂತ್ರ ಹೂಡಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಆರೋಪಿಸಿದರು.
ಇಲ್ಲಿನ ಪಟೇಲನಗರದ ಬಿಜೆಪಿ ಕಚೇರಿಯಲ್ಲಿ ಈಶಾನ್ಯ ಶಿಕ್ಷಕರ ಮತ ಕ್ಷೇತ್ರದ ಅಭ್ಯರ್ಥಿಯ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಆರ್.ಆರ್.ನಗರದ ಚುನಾವಣೆಯು ಡಿಕೆಶಿ ಸಹೋದರರಿಗೆ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಆದರೆ, ಆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನೇ ಸೋಲಿಸುವ ಮೂಲಕ ಶಿವಕುಮಾರ್ ಅವರನ್ನು ಕರ್ನಾಟಕದಲ್ಲಿ ತಲೆ ಎತ್ತದಂತೆ ಸ್ವಪಕ್ಷದವರು ಮಾಡುತ್ತಿದ್ದಾರೆ ಎಂದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿ, ಕಾಂಗ್ರೆಸ್ನಲ್ಲಿ ಬಂಡೆಗಳಿದ್ದರೆ, ಬಿಜೆಪಿಯಲ್ಲಿ ಡೈನಾಮಿಕ್ ಇವೆ. ಡೈನಾಮಿಕ್ ಬಂಡೆಯನ್ನು ಚೂರು ಮಾಡಬಲ್ಲದು. ನಾವು ಸೋಲಿಸುವುದಲ್ಲ, ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಸ್ವಪಕ್ಷದವರೇ ನಿರ್ಧಾರ ಮಾಡಿದ್ದಾರೆ. ಇದರಿಂದ ಬಿಜೆಪಿ ಸ್ವಲ್ಪ ಪ್ರಯತ್ನ ಪಟ್ಟರೇ ಗೆಲುವು ಸುಲಭವಾಗಲಿದೆ ಎಂದು ಹೇಳಿದರು.
ಅರಣ್ಯ ಖಾತೆಯ ಸಚಿವ ಆನಂದ ಸಿಂಗ್, ಈಶಾನ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ, ಶಾಸಕರಾದ ಸೋಮಶೇಖರ್ ರೆಡ್ಡಿ, ಕರುಣಾಕರ ರೆಡ್ಡಿ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ, ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಇನ್ನಿತರರಿದ್ದರು.