ಹೊಸಪೇಟೆ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಇದನ್ನು ಕಾಂಗ್ರೆಸ್ ಪಕ್ಷದವರು ನಂಬುತ್ತಿಲ್ಲ. ಬಿಜೆಪಿ ಜಿಲ್ಲಾವಾರು ಸಮಾವೇಶ ಮಾಡುತ್ತಿದೆ. ಅದೇ ತರನಾಗಿ ಕಾಂಗ್ರೆಸ್ ಜಿಲ್ಲಾವಾರು ಸಮಾವೇಶ ಮಾಡಲಿ. ಕಾಂಗ್ರೆಸ್ ನವರಿಗೆ ಸಮಾವೇಶ ನಡೆಸಲು ತಾಕತ್ ಇಲ್ಲ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಟೀಕಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಚಿವರೆಲ್ಲ ಸೇರಿ ಎಲ್ಲ ಜಿಲ್ಲೆಗಳಲ್ಲಿ ಸಮಾವೇಶವನ್ನು ಮಾಡಲಾಗುತ್ತಿದೆ. ಆದರೆ, ಐದು ವರ್ಷ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಹಾಗೂ ಡ್ಯಾಶಿಂಗ್ ಡಿ.ಕೆ. ಶಿವಕುಮಾರ್ ಅವರಿಂದ ಪ್ರತಿ ಜಿಲ್ಲೆಯಲ್ಲಿ ಯಾಕೆ ಸಮಾವೇಶ ಮಾಡಲು ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ನವರಿಗೆ ಜಿಲ್ಲಾ ಸಮಾವೇಶ ಮಾಡಲು ಭರವಸೆ ಇಲ್ಲ. ಬೆಳಗಾವಿಯಲ್ಲಿ ವಿಭಾಗದ ಸಮಾವೇಶವನ್ನು ಮಾಡಲಾಯಿತು. ಅಂದರೇ ಜಿಲ್ಲಾವಾರು ಸಮಾವೇಶ ಮಾಡದಷ್ಟು ಅಧೋಗತಿಗೆ ಕಾಂಗ್ರೆಸ್ ತಲುಪಿದೆ. ಚುನಾವಣೆಯಲ್ಲಿ ಸೋತು ಸುಣ್ಣವಾಗಿದೆ. ಅಲ್ಲದೇ, ಜನರಿಂದ ತಿರಸ್ಕಾರವಾಗಿದೆ. ಹೆಸರು ಹೇಳದಂತ ಪರಿಸ್ಥಿತಿ ಕಾಂಗ್ರೆಸ್ಗೆ ಬರಲಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಮಧ್ಯೆ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಫೈಟಿಂಗ್ ನಡೆಯುತ್ತಿದೆ ಎಂದು ಶೆಟ್ಟರ್ ಹೇಳಿದರು.
ಮಾಜಿ ಸಚಿವ ಜಿ. ಪರಮೇಶ್ವರ್ ಸಹ ಮುಖ್ಯಮಂತ್ರಿಯಾಗುವ ಚಾನ್ಸ್ ಗೋಸ್ಕರ ಕಾಯುತ್ತಿದ್ದಾರೆ. ಅಲ್ಲಿ ಹೊಡೆದಾಟ, ಬಡೆದಾಟ ಆಗುತ್ತಿದೆ. ರಾಷ್ಟ್ರಮಟ್ಟದಲ್ಲೂ ಸಹ ಪಕ್ಷ ಅಧೋಗತಿಗೆ ತಲುಪಿದೆ. ನರೇಂದ್ರ ಮೋದಿ ಅವರನ್ನು ಎದುರಿಸುವ ಪರ್ಯಾಯ ನಾಯಕರು ಕಾಂಗ್ರೆಸ್ ನಲ್ಲಿ ಇಲ್ಲವೆಂದು ಸಚಿವರು ಅಭಿಪ್ರಾಯಪಟ್ಟರು.
ಸಿಎಂ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿd ಶೆಟ್ಟರ್, ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅವರೇ ಮುಂದುವರಿಯಲ್ಲಿದ್ದಾರೆ ಎಂದರು. ಇದೇ ವೇಳೆ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್, ಸಚಿವೆ ಶಶಿಕಲಾ ಜೊಲ್ಲೆ ಸೇರಿ ಇನ್ನಿತರರು ಉಪಸ್ಥಿತರಿದ್ದರು.