ಬಳ್ಳಾರಿ: ಯುವಕನೊಂದಿಗೆ ಪ್ರೇಮ ವಿವಾಹಕ್ಕೆ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದು, ಬಳ್ಳಾರಿಯ ಶಕ್ತಿಧಾಮ ಸಾಂತ್ವನ ಕೇಂದ್ರದ ಮುಂದೆ ಮಂಗಳವಾರ ರಾತ್ರಿ ಗಲಾಟೆ, ಹೈಡ್ರಾಮಾ ನಡೆದಿದೆ. ಮನೆಯವರ ವಿರೋಧದ ನಡುವೆಯೂ ಸಿನಿಮಾ ಸ್ಟೈಲ್‍ನಲ್ಲಿ ಪೇಮಿಗಳು ಕಾರಿನಲ್ಲಿಯೇ ಹಾರ ಬದಲಾಯಿಸಿಕೊಂಡು ಮದುವೆ ಆಗಿದ್ದಾರೆ.
ಬಳ್ಳಾರಿಯ ತೆಕ್ಕಲಕೋಟೆಯ ಯುವಕ ಶಿವಪ್ರಸಾದ್ ಹಾಗೂ ಕೊಪ್ಪಳ ಮೂಲದ ಯುವತಿ ಅಮೃತಾ ಪರಸ್ಪರ ಪ್ರೀತಿಸಿ, ಮದುವೆಯಾದವರು. ಆದರೆ, ಪ್ರೇಮ ವಿವಾಹಕ್ಕೆ ಯುವತಿಯ ಪೋಷಕರು ವಿರೋಧ ವ್ಯಕ್ತಿಪಡಿಸಿದ್ದರು. ಬಳಿಕ ಬಳ್ಳಾರಿ ಶಾಂತಿಧಾಮ ಸಾಂತ್ವನ ಕೇಂದ್ರಕ್ಕೆ ಯುವತಿ ಶಿಫ್ಟ್ ಆಗಿದ್ದಾರೆ.
ಇದರಿಂದಾಗಿ ಯುವತಿಯ ಪೋಷಕರು ಶಾಂತಿಧಾಮ ಸಾಂತ್ವನ ಕೇಂದ್ರಕ್ಕೆ ಧಾವಿಸಿದ್ದರು. ಈ ವೇಳೆ ಯುವತಿ ಒಂದು ಬಾರಿ ಪೋಷಕರು ಬೇಕೆಂದು, ಮತ್ತೊಮ್ಮೆ ಪ್ರೇಮಿ ಬೇಕೆಂದು ದ್ವಂದ್ವ ಹೇಳಿಕೆ ನೀಡಿದ್ದಾಳೆ. ಹೀಗಾಗಿ ಸಾಂತ್ವನ ಕೇಂದ್ರದ ಮುಂದೆ ಗೊಂದಲದ ವಾತಾವರಣ ಕಂಡುಬಂತು.
ಯುವತಿಯನ್ನ ಪೋಷಕರು ಎಳೆದುಕೊಂಡು ಕಾರು ಹತ್ತಿಸಲು ಯತ್ನಿಸಿದ್ದಾರೆ. ಆಗ ಎರಡೂ ಕಡೆಯ ಪೋಷಕರ ನಡುವೆ ಗಲಾಟೆ ಆಯಿತು. ಎಳೆದೊಯ್ಯುವಾಗ 'ಗಂಡ ಬೇಕು' ಅಂತಾ ಯುವತಿ ಅರಚಾಡಿದ್ದಾಳೆ. ಆಗ ಕಾರು ಅಡ್ಡಗಟ್ಟಿ ಪ್ರೇಯಸಿಗಾಗಿ ಯುವಕ ಗೋಗರೆದಿದ್ದಾನೆ. ಪೊಲೀಸರ ಮುಂದೆಯೇ ಈ ಹೈಡ್ರಾಮಾ ನಡೆದಿದೆ.
ಬಳಿಕ ತನಗೆ ಹೆಂಡ್ತಿನೂ ಬೇಕು, ರಕ್ಷಣೆಯೂ ಬೇಕು ಎಂದು ಇಡೀ ರಾತ್ರಿ ಯುವಕ ಸಾಂತ್ವನ ಕೇಂದ್ರದ ಎದುರು ಕುಳಿತಿದ್ದಾನೆ. ಕೊನೆಗೆ ಯುವತಿಯ ಪೋಷಕರು ಆಕೆಯನ್ನು ಸಾಂತ್ವನ ಕೇಂದ್ರದಲ್ಲಿಯೇ ಬಿಟ್ಟು ಹೋಗಿದ್ದಾರೆ. ಯುವತಿ ಹಾಗೂ ಯುವಕ ಬೇರೆ ಬೇರೆ ಜಾತಿಯವರೆಂದು ಪೋಷಕರು ವಿವಾಹಕ್ಕೆ ಒಪ್ಪಿರಲಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಯುವಕನ ಸಂಬಂಧಿ ಅರೆಬೆತ್ತಲೆಗೊಳಿಸಿ ಥಳಿತ ಆರೋಪ: ಓಡಿ ಹೋಗಿದ್ದ ಜೋಡಿ ಎಸ್ಪಿಗೆ ಮೊರೆ