ಬಳ್ಳಾರಿ: ಕೋವಿಡ್ ಕರ್ತವ್ಯನಿರತ ತಜ್ಞ ವೈದ್ಯರೊಂದಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಿಂದ ವರ್ಚುವಲ್ ವೇದಿಕೆಯ ಮೂಲಕ ಸಂವಾದ ನಡೆಸಿ, ಕೋವಿಡ್ ನಿಯಂತ್ರಣಕ್ಕೆ ಸಲಹೆಗಳನ್ನು ಪಡೆದರು.
ಬೆಂಗಳೂರಿನ ಡಾ.ಲಕ್ಷ್ಮೀಪತಿ, ಮಣಿಪಾಲ್‍ನ ಡಾ.ಶಶಿಕಿರಣ್ ಉಮಾಕಾಂತ್, ಬಳ್ಳಾರಿಯ ಅರಿವಳಿಕೆ ಹಾಗೂ ತೀವ್ರ ಚಿಕಿತ್ಸಾ ತಜ್ಞ ಡಾ. ಶ್ರೀನಿವಾಸಲು, ವಿಜಯಪುರದ ಡಾ.ಮೀನಾಕ್ಷಿ ಮುತ್ತಪ್ಪನವರ್, ಮಂಗಳೂರಿನ ಡಾ.ಶರತ್ ಬಾಬು, ಗೋಕಾಕ್ನ ಡಾ.ಮಹಾಂತೇಶ್ ಶೆಟ್ಟಪ್ಪನವರ್, ಅರಕಲಗೂಡಿನ ಡಾ.ದೀಪಕ್, ಮೈಸೂರಿನ ಡಾ.ತ್ರೀವೇಣಿ, ತುಮಕೂರಿನ ಡಾ.ಭಾನುಪ್ರಕಾಶ್, ಕಲಬುರಗಿಯ ಡಾ.ಧನರಾಜ್ ಹಾಗು ತೀರ್ಥಹಳ್ಳಿಯ ಡಾ.ಗಣೇಶ ಭಟ್ ಈ ಸಂವಾದದಲ್ಲಿ ಭಾಗಿಯಾಗಿದ್ದರು.
ತಮ್ಮ ಜಿಲ್ಲೆಗಳಲ್ಲಿರುವ ಕೋವಿಡ್ ಸೋಂಕಿನ ಸ್ಥಿತಿಗತಿ, ಆಕ್ಸಿಜನ್, ಹಾಸಿಗೆ, ಔಷಧಿಗಳ ಲಭ್ಯತೆ, ಸೋಂಕು ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು, ಗ್ರಾಮೀಣ ಭಾಗದಲ್ಲಿ ಸೋಂಕು ಹರಡದಂತೆ ನಿಯಂತ್ರಿಸಲು ಸಲಹೆ, ತಜ್ಞ ವೈದ್ಯರಾಗಿ ಕೋವಿಡ್ ಸೋಂಕಿತರಿಗೆ ನೀಡಿದ ಚಿಕಿತ್ಸೆಯ ವಿವರ ಮತ್ತು ಸಲಹೆಗಳನ್ನು ಸಿಎಂ ತಜ್ಞ ವೈದ್ಯರಿಂದ ಪಡೆದರು.
ಬಳ್ಳಾರಿ ಜಿಲ್ಲೆಯಲ್ಲಿ 207 ಐಸಿಯು ಬೆಡ್‍ಗಳಿದ್ದು, ಅವುಗಳಲ್ಲಿ 101 ಬೆಡ್ಗಳಿಗೆ ವೆಂಟಿಲೇಟರ್ ಸೌಲಭ್ಯವಿದೆ. 1,268 ಹೆಚ್‍ಡಿಯು- ಹೆಚ್‍ಎಫ್‍ಯು ಸೌಲಭ್ಯವಿರುವ ಬೆಡ್‍ಗಳಿವೆ ಮತ್ತು 378 ಸಾಮಾನ್ಯ ಹಾಸಿಗೆಗಳಿವೆ ಎಂದು ಡಾ.ಶ್ರೀನಿವಾಸಲು ವಿವರಿಸಿದರು.
ಇದನ್ನೂ ಓದಿ: ಪಡಿತರ ಚೀಟಿದಾರರಿಗೆ ಬಯೋಮೆಟ್ರಿಕ್ ವ್ಯವಸ್ಥೆಯಿಂದ ವಿನಾಯಿತಿ: ಬಳ್ಳಾರಿ ಡಿಸಿ
ಬಳ್ಳಾರಿಯ ಜಿಂದಾಲ್‍ನಲ್ಲಿ ನಿತ್ಯ 1 ಸಾವಿರ ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದಿಸಲಾಗುತ್ತಿದ್ದು, ಇಲ್ಲಿಂದಲೇ ರಾಜ್ಯ ಮತ್ತು ಹೊರ ರಾಜ್ಯಗಳಿಗೆ ಆಕ್ಸಿಜನ್ ಪೂರೈಸಲಾಗುತ್ತಿದೆ. ನಮ್ಮ ಜಿಲ್ಲೆಗೆ ನಿತ್ಯ 33.7 ಕೆಎಲ್ ಆಕ್ಸಿಜನ್ ಅಗತ್ಯವಿದ್ದು, ಯಾವುದೇ ರೀತಿಯ ಆಕ್ಸಿಜನ್ ಸಮಸ್ಯೆ ನಮ್ಮ ಜಿಲ್ಲೆಯಲ್ಲಿ ಇಲ್ಲ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಸಮನ್ವಯದ ಮೂಲಕ ಅಗತ್ಯ ಇರುವೆಡೆ ಆಕ್ಸಿಜನ್ ಒದಗಿಸುವ ಕೆಲಸವನ್ನು ಬಳ್ಳಾರಿ ಜಿಲ್ಲಾಡಳಿತ ಮಾಡುತ್ತಿದೆ ಎಂದರು.
ಜಿಲ್ಲೆಯಲ್ಲಿ ಆಕ್ಸಿಜನ್, ಔಷಧ ಸೇರಿದಂತೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ ತಜ್ಞ ವೈದ್ಯ ಡಾ.ಶ್ರೀನಿವಾಸಲು, ಜಿಂದಾಲ್ ಎದುರುಗಡೆ 1 ಸಾವಿರ ಆಕ್ಸಿಜನ್ ಬೆಡ್‍ಗಳ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಲಾಗುತ್ತಿದ್ದು, ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇರುವುದನ್ನು ಸಿಎಂ ಅವರ ಗಮನಕ್ಕೆ ತಂದರು.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ತಾತ್ಕಾಲಿಕ ಆಸ್ಪತ್ರೆಗೆ ವೈದ್ಯರು ಹಾಗೂ ಸಿಬ್ಬಂದಿ ನೇಮಕಾತಿಗೆ ಪ್ರಕಟಣೆ ಹೊರಡಿಸಿದಾಗಿಯೂ ನಿರೀಕ್ಷಿಸಿದಷ್ಟು ಅರ್ಜಿಗಳು ಬರದ ಹಿನ್ನೆಲೆ ಕೊರತೆಯಾಗಿದೆ. ಹಾಗಾಗಿ ವಿಮ್ಸ್ನ ವೈದ್ಯರು ಹಾಗೂ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ನಿಯೋಜಿಸಲು ಉದ್ದೇಶಿಸಲಾಗಿದೆ ಎಂದರು. ಮುಖ್ಯಮಂತ್ರಿಗಳು ಇದಕ್ಕೆ ಸಮ್ಮತಿ ವ್ಯಕ್ತಪಡಿಸಿದರು.
ಅರಿವಳಿಕೆ ಹಾಗೂ ತೀವ್ರ ಚಿಕಿತ್ಸಾ ತಜ್ಞವೈದ್ಯರಾಗಿ ನೂರಾರು ಜೀವಗಳನ್ನು ಉಳಿಸುವಲ್ಲಿ ಯಶಸ್ವಿಯಾಗಿರುವ ಡಾ. ಶ್ರೀನಿವಾಸಲು ಕಾರ್ಯಕ್ಕೆ ಸಿಎಂ ಇದೇ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ರೀತಿಯ ಕಾರ್ಯವನ್ನು ಮುಂದುವರೆಸಿ, ಕೋವಿಡ್ ನಿಯಂತ್ರಣ ಕಾರ್ಯಕ್ಕೆ ಕೈಜೋಡಿಸುವಂತೆ ತಿಳಿಸಿದರು.
ಅಂತಿಮ ವರ್ಷದ ವಿದ್ಯಾರ್ಥಿಗಳನ್ನುಬಳಸಿಕೊಳ್ಳಲು ನಿರ್ಧಾರ : ಅಂತಿಮ ವರ್ಷದ ವೈದ್ಯಕೀಯ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳನ್ನು ಕೋವಿಡ್ ಕೆಲಸಕ್ಕೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು. ನುರಿತ ವೈದ್ಯರ ಮುಂದಾಳತ್ವದಲ್ಲಿ ಅಂತಿಮ ವರ್ಷದ ವೈದ್ಯ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳ ಸೇವೆಯನ್ನು ಬಳಸಿಕೊಳ್ಳಲಾಗುವುದು. ಈ ಮೂಲಕ ಸಿಬ್ಬಂದಿ ಕೊರತೆಯೂ ನೀಗಲಿದೆ ಹಾಗೂ ವೈದ್ಯರ ಮೇಲೆ ಉಂಟಾಗಿರುವ ಒತ್ತಡವೂ ಕಡಿಮೆಯಾಗಲಿದೆ ಎಂದರು.
ತಜ್ಞವೈದ್ಯರು ಸಹ ಇದಕ್ಕೆ ಸಮ್ಮತಿ ವ್ಯಕ್ತಪಡಿಸಿ, ಕೋವಿಡ್ ಚಿಕಿತ್ಸೆ ಎಂಬುದು ಸಾಮಾನ್ಯ ರೋಗಗಳಿಗೆ ನೀಡಿದ ಚಿಕಿತ್ಸೆ ರೀತಿಯಲ್ಲ. ಇದು ಸಂಪೂರ್ಣ ವಿಭಿನ್ನವಾಗಿದ್ದು, ಅಂತಿಮ ವರ್ಷದ ವೈದ್ಯ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಿ ಬಳಸಿಕೊಂಡರೇ ಒಳ್ಳೆಯದು ಎಂದರು.
ಸಂವಾದ ನಡೆಸಿ ಒತ್ತಡ ನೀಗಿಸಿ : ಕೋವಿಡ್ ಶುರುವಾದಾಗಿನಿಂದ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಬಹಳಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಒತ್ತಡ ನೀಗಿಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ, ಸಮಸ್ಯೆ ಆಲಿಸಿ ಸ್ಪಂದಿಸುವ ಕೆಲಸವಾಗಬೇಕು ಎಂದು ತಜ್ಞವೈದ್ಯರು ಅಭಿಪ್ರಾಯ ಮಂಡಿಸಿದರು. ಇದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಕೂಡ ಸಮ್ಮತಿ ವ್ಯಕ್ತಪಡಿಸಿ, ಶೀಘ್ರ ಈ ರೀತಿಯ ಸಂವಾದ ಏರ್ಪಡಿಸಲಾಗುವುದು ಎಂದರು.
ವೈದ್ಯಕೀಯ ಸಿಬ್ಬಂದಿ ನಾಡಿನ ಅಮೂಲ್ಯ ಆಸ್ತಿ: ಅಪಾಯವನ್ನೂ ಲೆಕ್ಕಿಸದೆ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಅಮೂಲ್ಯ ಆಸ್ತಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಬಣ್ಣಿಸಿದರು. ವೈದ್ಯಕೀಯ ಸಿಬ್ಬಂದಿಯ ರಕ್ಷಣೆಗೆ ಸರ್ಕಾರ ಬದ್ಧವಿದೆ. ಸೋಂಕು ತೀವ್ರಗೊಳ್ಳುತ್ತಿರುವ ಈ ಸಂದರ್ಭದಲ್ಲಿ ವೈದ್ಯರು ಮಾನವೀಯತೆಯ ನೆಲೆಗಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದ ಸಿಎಂ, ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ.ಪಿ. ಎಸ್. ಹರ್ಷ ಮತ್ತಿತರರು ಇದ್ದರು.