ತುಮಕೂರು: ದ್ವಿಚಕ್ರ ವಾಹನದಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದುದನ್ನು ಕಂಡು ದಂಡ ವಿಧಿಸಲು ತೆರಳಿದ್ದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ನಾಲ್ವರು ಯುವಕರನ್ನು ಬಂಧಿಸಲಾಗಿದೆ.
ತುಮಕೂರು ನಗರದ ರಾಣಿ ಚೆನ್ನಮ್ಮ ಸರ್ಕಲ್ ಸಮೀಪದ ರಿಂಗ್ ರಸ್ತೆಯಲ್ಲಿ ಜನವರಿ 27ರಂದು ಸಂಜೆ 7.30ರ ಹೊತ್ತಿಗೆ ಘಟನೆ ನಡೆದಿದೆ. ತುಮಕೂರು ನಗರದ ಮೊಹಮದ್ ಇಸ್ಮಾಯಿಲ್, ಮೊಹಮದ್ ಅಬ್ಬಾಸ್, ಅದ್ಮಾನ್ ಅಹಮದ್, ಮೊಹಮದ್ ಅಲೀ ಬಂಧಿತರು.
ತಿಲಕ್ ಪಾರ್ಕ್ ಪೊಲೀಸ್ ಠಾಣೆ ಮಹಿಳಾ ಪಿಎಸ್ಐ ಟಿ.ಎಸ್.ಚಂದ್ರಕಲಾ ಮತ್ತು ಎಎಸ್ಐ ಮೋಹನ್ ಕುಮಾರ್ ಕೆ. ಹಾಗೂ ಸಿಬ್ಬಂದಿ ತಮ್ಮರಾಯ ಮಾಡಕರಿ ರಾಣಿ ಚೆನ್ನಮ್ಮ ಸರ್ಕಲ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಸರ್ವೀಸ್ ರಸ್ತೆಯಿಂದ ರಿಂಗ್ ರಸ್ತೆಗೆ KA-06-EV-3695 ನಂಬರ್ನ ಹೋಂಡಾ ಆ್ಯಕ್ಟಿವಾ ಸ್ಕೂಟರ್ ಒಂದರಲ್ಲಿ ನಾಲ್ವರು ಯುವಕರು ಕುಳಿತುಕೊಂಡು, ಯಾವುದೇ ಹೆಲ್ಮೆಟ್ ಧರಿಸದೆ, ತಪ್ಪಾದ ರೂಟ್ನಲ್ಲಿ ಬರುತ್ತಿದ್ದರು.
ರಸ್ತೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದವರನ್ನು ತಡೆದು ನಿಲ್ಲಿಸಿ ದಂಡ ಪಾವತಿಸುವಂತೆ ಸೂಚಿಸಿದಾಗ, ಯುವಕರು ಕರ್ತವ್ಯದಲ್ಲಿದ್ದ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿದ್ದರು. ಪೊಲೀಸರನ್ನು ತಳ್ಳಿ ಕೆಳಗೆ ಬೀಳಿಸಿ ದುರ್ನಡತೆ ತೋರಿ ಮತ್ತೆ ತಮ್ಮ ಮೊಬೈಲ್ ಫೋನ್‌ಗಳಲ್ಲಿ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಸುಳ್ಳು ಮಾಹಿತಿ ವೈರಲ್ ಮಾಡಿದ್ದರು. ವಿನಾಕಾರಣ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಕಿಡಿಗೇಡಿಗಳ ವಿರುದ್ಧ ಕಾನೂನು ರೀತಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: 2 ಲಕ್ಷ ಸಂಚಾರಿ ನಿಯಮ ಉಲ್ಲಂಘನೆ ಕೇಸುಗಳು ಬಾಕಿ: ವಾಹನ ಸವಾರರಿಂದ ಬರಬೇಕಿದೆ ₹10 ಕೋಟಿ