ಬಳ್ಳಾರಿ: ಅಗತ್ಯ ಪ್ರಮಾಣದಷ್ಟು ಮಳೆಯಾಗದೆ ಪರಿಣಾಮ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಬರಗಾಲದಿಂದ ತತ್ತರಿಸಿವೆ. ಹೀಗಾಗಿ ಸಚಿವ ಎನ್ ಎಸ್ ಬೋಸರಾಜ್ ಅವರ ಫೌಂಡೇಷನ್ ಮತ್ತು ಶಾಸಕ ಪ್ರಕಾಶ್ ಕೋಳಿವಾಡ ಅವರ ಪಿಕೆಕೆ ಸಂಸ್ಥೆ ವತಿಯಿಂದ ರಾಯಚೂರಿನಲ್ಲಿ ಮೋಡ ಬಿತ್ತನೆ ಕಾರ್ಯ ಮಾಡಲಾಗುತ್ತಿದೆ. ಇದಕ್ಕಾಗಿ ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ಮೂರು ದಿನಗಳ ಕಾಲ ಮೋಡ ಬಿತ್ತನೆ ಮಾಡಲಿದೆ.
ಸಚಿವ ಎನ್ ಎಸ್ ಬೋಸರಾಜ್ ಅವರ ಪುತ್ರ ರವಿ ಬೋಸರಾಜ್ ಮಾತನಾಡಿ, "ಕರ್ನಾಟಕ ಸೇರಿದಂತೆ ದೇಶಾದ್ಯಂತ ಬರದ ಪರಿಸ್ಥಿತಿ ಉಂಟಾಗಿದೆ. ಪಿಕೆಕೆ ಸಂಸ್ಥೆಯವರು ಹಲವು ವರ್ಷಗಳಿಂದ ಮೋಡ ಬಿತ್ತನೆ ಮಾಡುತ್ತಿದ್ದಾರೆ. ಹಿಂದೆ ಸಿದ್ದರಾಮಯ್ಯ ನವರ ಸರ್ಕಾರದಲ್ಲಿ ಹೆಚ್.ಕೆ ಪಾಟೀಲ್ ನೀರಾವರಿ ಸಚಿವರಾಗಿದ್ದಾಗ ಮೋಡ ಬಿತ್ತನೆ ಮಾಡಲಾಗಿತ್ತು. ಈ ಪ್ರಯೋಗ ಹಾವೇರಿ ಮತ್ತು ಗದಗದಲ್ಲಿ ಹೆಚ್.ಕೆ ಪಾಟೀಲ್ ಮತ್ತು ಪ್ರಕಾಶ್ ಕೋಳಿವಾಡ ನೇತೃತ್ವದಲ್ಲಿ ನಡೆದಿತ್ತು" ಎಂದರು.
"ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮೋಡ ಬಿತ್ತನೆ ಮಾಡಿಸಿದ್ದಾರೆ. ನಮ್ಮ ತಂದೆಯವರು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿರುವುದರಿಂದ ಜನರಿಗೆ ಮತ್ತು ರೈತರಿಗೆ ಅನುಕೂಲವಾಗಿಲಿ ಎಂದು ಈ ಪ್ರಯತ್ನ ಮಾಡುತ್ತಿದ್ದೇವೆ. ಇದರಲ್ಲಿ ಪ್ರಕಾಶ್ ಕೋಳಿವಾಡ್ ಅವರು ಕೂಡ ಭಾಗಿಯಾಗಿದ್ದಾರೆ. ಮಧ್ಯಾಹ್ನ 2 ಗಂಟೆಯಿಂದ ಉತ್ತಮವಾದ ವಾತಾವರಣ ಇದೆ. ಸಿಂಧನೂರು, ಮಾನ್ವಿ, ರಾಯಚೂರು, ಮಸ್ಕಿ, ದೇವದುರ್ಗದಲ್ಲಿ ಇಂದಿನಿಂದ ಮೂರು ದಿನ ಮೋಡ ಬಿತ್ತನೆ ಮಾಡುತ್ತಿದ್ದೇವೆ" ಎಂದು ಹೇಳಿದರು.
"ಮೋಡ ಬಿತ್ತನೆಯಿಂದ 10 mm ಮಳೆಯಾಗುವ ಕಡೆ 35 ರಿಂದ 40 mm ಮಳೆಯಾಗಿದೆ. ಇದರಿಂದ 250 ಹಳ್ಳಿಗಳಿಗೆ ಅನುಕೂಲ ಆಗಿದೆ ಎಂದು ಎನ್ಡಿಆರ್ಎಫ್ ವರದಿ ನೀಡಿದೆ. ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ಮೆಣಸಿಕಾಯಿ ಬೆಳೆಗೆ ನೀರು ಒದಗಿಸುತ್ತಿದ್ದಾರೆ. ವಿಜ್ಞಾನಿಗಳು ಮೋಡ ಬಿತ್ತನೆಯಿಂದ ಮಳೆ ಆಗಿಯೇ ಆಗುತ್ತದೆ ಎಂದು ಭರವಸೆ ನೀಡಿದ್ದಾರೆ. ಮಳೆಯಾದರೆ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದಿರುವ ಬೆಳೆಗೆ ಅನುಕೂಲವಾಗುತ್ತದೆ" ಎಂದರು.
ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಮಾತನಾಡಿ, "ಹಾವೇರಿಯಲ್ಲಿ ಮೂರು ದಿನ ಸುಮಾರು 9 ಗಂಟೆಗಳ ಕಾಲ ಮೋಡ ಬಿತ್ತನೆ ಮಾಡಲಾಗಿತ್ತು. ಸಚಿವ ಸತೀಶ್ ಜಾರಕಿಹೊಳಿ ಅವರು ನಮ್ಮನ್ನು ಬೆಳಗಾವಿಗೆ ಕಡೆಸಿಕೊಂಡು ಮೂರು ದಿನಗಳ ಕಾಲ ಎಂಟೂವರೆ ಗಂಟೆಗಳ ಕಾಲ ಮೋಡ ಬಿತ್ತನೆ ಮಾಡಿಸಿದರು. ಅದೇ ರೀತಿ ರಾಚೂರಿನಲ್ಲಿ ಮಳೆ ಆಗಲು ಉತ್ತಮವಾದ ವಾತಾವರಣ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಹೇಳಿರುವುದರಿಂದ ಇಲ್ಲಿ ಮೂರು ದಿನಗಳ ಕಾಲ ಮೋಡ ಬಿತ್ತನೆ ಮಾಡಲಾಗುತ್ತಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ರಾಯಚೂರು: ಮೂರು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆಗೆ ನಗರಸಭೆ ನಿರ್ಧಾರ