ಬಳ್ಳಾರಿ: ಗಣಿ ನಗರಿಯ ಜನರು ಸಾಮಾಜಿಕ ಜವಾಬ್ದಾರಿಯನ್ನ ಯಾವತ್ತೂ ಕೂಡ ಮರೆಯಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅಭಿಪ್ರಾಯಪಟ್ಟಿದ್ದಾರೆ.
ಬಳ್ಳಾರಿಯ ಅದಿದೇವತೆ ಕನಕ ದುರ್ಗಮ್ಮ ದೇಗುಲದ ಆವರಣದಲ್ಲಿ ಇಂದು ಮಹಾನಗರ ಪಾಲಿಕೆ ವತಿಯಿಂದ 'ಸ್ವಚ್ಛ ಬಳ್ಳಾರಿ-ಸ್ವಾಸ್ಥ್ಯ ಬಳ್ಳಾರಿ' ಸ್ವಚ್ಛತಾ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.
ಜನರು ಎಲ್ಲೆಂದರಲ್ಲಿ ಕಸ ವಿಲೇವಾರಿ ಮಾಡುತ್ತಿರುವುದನ್ನು ನಾನೇ ಸ್ವತಃ ಕಣ್ಣಾರೆ ಕಂಡಿರುವೆ. ಇದರಿಂದ ಸುತ್ತಮುತ್ತಲಿನ ಪರಿಸರ ಹಾಳು ಆಗೋದರ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನೂ ಕೂಡ ಹದಗೆಡಿಸಲಿದೆ. ಹೀಗಾಗಿ, ಜನರು ಸಾಮಾಜಿಕ ಜವಾಬ್ದಾರಿಯನ್ನ ಮರೆಯಬಾರದು ಎಂದು ಸಲಹೆ ನೀಡಿದರು.
ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಮಾತನಾಡಿ, ಈ ದಿನದಿಂದಲೇ ಮಹಾನಗರದ ನಾಲ್ಕು ವಾರ್ಡ್ಗಳಲ್ಲಿ ಕಸ ಸಂಗ್ರಹಣೆ ಮಾಡುವ ಕಾರ್ಯವನ್ನ ಮಾಡಲಿದ್ದೇವೆ. ಒಣ ಹಾಗೂ ಹಸಿ ಕಸ ಸೇರಿದಂತೆ ಇನ್ನಿತರೆ ತ್ಯಾಜ್ಯ ಸಂಗ್ರಹಣೆಗೆ ಒತ್ತು ನೀಡಲಾಗುವುದು ಎಂದರು.