ಹೊಸಪೇಟೆ(ವಿಜಯನಗರ): ರಾಜ್ಯ ಎರಡನೇ ಕೋವಿಡ್ ಅಲೆಯಿಂದ ಚೇತರಿಸಿಕೊಳ್ಳುವ ಹಂತದಲ್ಲಿದೆ. ಆದರೆ, ಜನರಲ್ಲಿ ಮೂರನೇ ಅಲೆ ಭಯ ಶುರುವಾಗಿದೆ. ಮಕ್ಕಳನ್ನು ಬಾಧಿಸಲಿದೇ ಎಂಬ ಆತಂಕ ಪೋಷಕರಲ್ಲಿ ಮನೆ ಮಾಡಿದೆ. ಈ ಕುರಿತು ಮಕ್ಕಳ ತಜ್ಞರು ಭಯ ಪಡುವ ಅಗತ್ಯವಿಲ್ಲ ಎಂದು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ.
ಕೊರೊನಾ ಮೂರನೇ ಅಲೆಗೆ ಪಾಲಕರು ಭಯ ಪಡುವಂತಹ ಅವಶ್ಯಕತೆ ಇಲ್ಲ. ಜಾಗೃಕತೆಯಿಂದ ಅಲೆಯನ್ನ ಎದರಿಸಬೇಕು. ಮೂರನೇ ಅಲೆ ಮಕ್ಕಳನ್ನು ಬಾಧಿಸಲಿದೆ ಎಂಬ ಖಚಿತತೆ ಇಲ್ಲ. ಆದರೂ ಮೈ ಮರೆಯುವಂತಿಲ್ಲ ಎಂಬುದು ಅಕ್ಷರ ಸಹ ಸತ್ಯ.
ಮಕ್ಕಳನ್ನು ಬಿಟ್ಟಿಲ್ಲ ಕೋವಿಡ್ : ಕೊರೊನಾ ಎರಡನೇ ಅಲೆ ಮಕ್ಕಳನ್ನು ಸಹ ಬಿಟ್ಟಿಲ್ಲ. ವಿಜಯನಗರ ಜಿಲ್ಲೆಯಲ್ಲಿ 0 ರಿಂದ 18 ವರ್ಷದವರಿಗಿನ 2047 ಜನ ಮಕ್ಕಳಿಗೆ ಸೋಂಕು ವಕ್ಕರಿಸಿದೆ. ಅದೃಷ್ಟ ಯಾರೂ ಮೃತಪಟ್ಟಿಲ್ಲ. ಹೊಸಪೇಟೆಯಲ್ಲಿ-866, ಹಗರಿಬೊಮ್ಮನಹಳ್ಳಿ-328, ಹರಪನಹಳ್ಳಿ-277, ಕೂಡ್ಲಿಗಿ-269 ಮಕ್ಕಳಿಗೆ ಮಹಾಮಾರಿ ಕಾಡಿದೆ.
ಕೊರೊನಾ ಎಲ್ಲರನ್ನು ಬಾಧಿಸಲಿದೆ : ಮೂರನೇ ಅಲೆ ಬರುವ ಸಾಧ್ಯತೆ ಇದೆ. ಆದರೆ, ಬಂದೇ ಬರುತ್ತದೆ ಎಂಬುವ ಕುರಿತು ಖಚಿತತೆ ಇಲ್ಲ. ಮಕ್ಕಳಿಗೆ ಮಾತ್ರ ಬರುತ್ತದೆ ಎಂದು ಹೇಳಲಾಗುತ್ತಿದ್ದು, ಇದೊಂದು ತಪ್ಪು ಕಲ್ಪನೆ. ಕೊರೊನಾ ಎಲ್ಲರನ್ನು ಬಾಧಿಸಲಿದೆ ಎಂಬುದು ಮಕ್ಕಳ ತಜ್ಞರ ಅಭಿಪ್ರಾಯವಾಗಿದೆ.
ಪೋಷಕರು ಆತಂಕಪಡುವುದು ಬೇಡ : ಪೋಷಕರು ಆತಂಕ ಪಡುವುದು ಬೇಡ. ಮಕ್ಕಳಿಗೆ ಕೋವಿಡ್ ಥರ್ಡ್ ವೇವ್ ಕಾಡಲಿದೆ ಎಂಬುದು ಚರ್ಚಿತ ವಿಷಯ. ಮೊದಲನೇ ಅಲೆ ಶೇ. 20ರಷ್ಟು, ಎರಡನೇ ಅಲೆ 23 ರಿಂದ 24 ರಷ್ಟು ಮಕ್ಕಳಿಗೆ ವಕ್ಕರಿಸಿದೆ. ಅಲ್ಲದೇ, ಆಸ್ಪತ್ರೆಗೆ ಬಂದು ದಾಖಲಾಗಿರುವುದು ತುಂಬಾ ವಿರಳ. ಹಾಗಾಗಿ, ಪಾಲಕರು ಭಯಪಡಬಾರದು ಎಂಬುದು ವೈದ್ಯರ ಸಲಹೆ.
ಮಕ್ಕಳಿಗೆ ಮಾತ್ರ ಮೂರನೇ ಅಲೆ ಕಾಡುವುದಿಲ್ಲ : ಮಕ್ಕಳ ವೈದ್ಯ ಸಂಘದ ರಾಜ್ಯ ಘಟಕದ ಅಧ್ಯಕ್ಷ ಅಶೋಕ ದಾತರ್ ಅವರು ಮಾತನಾಡಿ, ಕೊರೊನಾ ಮಕ್ಕಳಿಗೆ ಅಷ್ಟೊಂದು ಬಾಧಿಸುವುದಿಲ್ಲ. ಯಾಕೆಂದರೆ, ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚರುತ್ತದೆ. ಸೋಂಕು ಕಾಣಿಸಿದರೂ ಅಷ್ಟೊಂದು ಪರಿಣಾಮ ಬೀರುವುದಿಲ್ಲ. ಅಲ್ಲದೇ, ಮೂರನೇ ಅಲೆಯಲ್ಲಿ ಮಕ್ಕಳಿಗೆ ಮಾತ್ರ ಕೊರೊನಾ ವಕ್ಕರಿಸಲಿದೆ ಎಂಬುದು ಸುಳ್ಳು ಎಂದರು.
ಬಾಲ ಚೈತನ್ಯ ಕೇಂದ್ರ : ಮಕ್ಕಳ ವೈದ್ಯ ರಾಜೀವ್ ಅವರು ಮಾತನಾಡಿ, ಮಕ್ಕಳಿಗೆ ಕೊರೊನಾ ಬಂದಾಗ ಆಸ್ಪತ್ರೆಗೆ ಬರುವುದು ತುಂಬಾ ಕಡಿಮೆ. ಹಾಗಾಗಿ, ಅಪೌಷ್ಟಿಕತೆಯಿಂದಿರುವ ಮಕ್ಕಳನ್ನು ಕೊರೊನಾ ಬಾಧಿಸಬಹುದು ಎಂಬ ಆಲೋಚನೆ ಇದೆ. ಹಾಗಾಗಿ, ಬಳ್ಳಾರಿ ಜಿಲ್ಲಾಡಳಿತ ಬಾಲ ಚೈತನ್ಯ ಕೇಂದ್ರವನ್ನು ತೆರೆದಿದೆ ಎಂದು ಮಾಹಿತಿ ನೀಡಿದರು.