ಹೊಸಪೇಟೆ: ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಟಿ.ಎಂ. ಚಂದ್ರಶೇಖರಯ್ಯ ಅವರು ನೀಡಿದ್ದ ರಾಜೀನಾಮೆ ಅಂಗೀಕಾರವಾಗಿದ್ದು, ಸಚಿವ ಆನಂದ ಸಿಂಗ್ ಅವರ ಹಾದಿ ಸುಗಮವಾಗಿದೆ.
ಕೆಲ ದಿನಗಳ ಹಿಂದೆ ಆನಂದ ಸಿಂಗ್ ಅವರು ಬಿಡಿಸಿಸಿ ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಇದರ ಬೆನ್ನಲ್ಲೇ ಚಂದ್ರಶೇಖರಯ್ಯ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈಗ ಅಧ್ಯಕ್ಷ ಸ್ಥಾನ ಖಾಲಿ ಇದ್ದು, ಕೆಲ ದಿನಗಳ ನಂತರ ಚುನಾವಣೆ ನಡೆಯಲಿದೆ. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗಾದಿಗಾಗಿ ಸಚಿವ ಆನಂದ ಸಿಂಗ್ ಅವರು ಸಹಕಾರ ಕ್ಷೇತ್ರದಲ್ಲಿ ಕಾಲಿಟ್ಟಿದ್ದಾರೆ ಎಂಬ ಅಭಿಪ್ರಾಯಗಳು ಬಲವಾಗಿ ಕೇಳಿ ಬಂದಿದ್ದವು.
ನಗರದ ಬಿಡಿಸಿಸಿ ಬ್ಯಾಂಕ್ನಲ್ಲಿ ಸುದ್ದಿಗಾರೊಂದಿಗೆ ಬಿಡಿಸಿಸಿ ಬ್ಯಾಂಕ್ನ ಮಾಜಿ ಅಧ್ಯಕ್ಷ ಟಿ.ಎಂ.ಚಂದ್ರಶೇಖರಯ್ಯ ಅವರು ಮಾತನಾಡಿ, ಎರಡು ವರ್ಷ ಅಧ್ಯಕ್ಷ ಸ್ಥಾನವನ್ನು ಪೂರೈಸಿದ್ದೇನೆ. ಇದು ಮೊದಲೇ ಒಪ್ಪಂದವಾಗಿತ್ತು. ಮುಂದಿನ ಅಧ್ಯಕ್ಷರ ಕುರಿತು ಬ್ಯಾಂಕಿನ ನಿರ್ದೇಶಕರು ತೀರ್ಮಾನ ಮಾಡಲಿದ್ದಾರೆ ಎಂದರು.
ಆನಂದ್ ಸಿಂಗ್ ಅವರು ಬ್ಯಾಂಕಿನ ನಿರ್ದೇಶಕರಿದ್ದಾರೆ. ಒಂದು ವೇಳೆ ಎಲ್ಲರೂ ಒಪ್ಪಿದರೆ ನಮ್ಮದು ಸಹಮತ ಇರುತ್ತದೆ. ಸಹಕಾರ ಕ್ಷೇತ್ರದಲ್ಲಿ ಪಕ್ಷ ಬರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದನ್ನೂ ಓದಿ: ಹೊಸ ಸಿಸಿ ಕ್ಯಾಮೆರಾ ಅಳವಡಿಸಲು ಪ್ರಸ್ತಾವನೆ : ಡಿವೈಎಸ್ಪಿ ವಿ.ರಘುಕುಮಾರ್
ಬ್ಯಾಂಕಿನ ಹಿರಿಯ ನಿರ್ದೇಶಕ ವೃಷಭೇಂದ್ರಯ್ಯ ಮಾತನಾಡಿ, ಬ್ಯಾಂಕಿನ ಅಧ್ಯಕ್ಷರ ಆಯ್ಕೆ ಎಲ್ಲರ ಅಭಿಪ್ರಾಯವಾಗಿದೆ. ಅದಕ್ಕೆ ನಮ್ಮ ಸಹಮತವಿದೆ. ಸಹಕಾರ ಬ್ಯಾಂಕ್ ಮೂಲಕ ಜನರಿಗೆ ಸಹಾಯ ಮಾಡುವ ಉದ್ದೇಶ ನಮ್ಮದು. ಈ ಹಿಂದೆ ಎರಡು ಬಾರಿ ಬ್ಯಾಂಕಿನ ಅಧ್ಯಕ್ಷನಾಗಿದ್ದೇನೆ. ಬ್ಯಾಂಕ್ ಅಧ್ಯಕ್ಷ ಆಕಾಂಕ್ಷಿ ನಾನಲ್ಲ. ಬ್ಯಾಂಕಿನ ನಿರ್ದೇಶಕರಿಗೆ ಸಹಕಾರ ನೀಡುವೆ ಎಂದರು.