ಹೊಸಪೇಟೆ: ನಗರದಲ್ಲಿರುವ ಚೈತನ್ಯ ಶಾಲೆಯ ಮಕ್ಕಳು ಅನಾಥರಿಗೆ ಹಾಗೂ ಅಂಧ ಮಕ್ಕಳಿಗೆ ಧನಸಹಾಯ ಮಾಡುವ ಉದ್ದೇಶದಿಂದ ತರಕಾರಿ ವ್ಯಾಪಾರ ಮಾಡಿದರು.
ಜೆಪಿ ನಗರದಲ್ಲಿರುವ ಚೈತನ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿನೂತನವಾದ ಕಾರ್ಯಕ್ರಮವನ್ನು ಶಿಕ್ಷಕರು ಆಯೋಜನೆ ಮಾಡಿ ಶಾಲಾ ಆವರಣದಲ್ಲಿ ಸಂತೆ ವಾತಾವರಣ ನಿರ್ಮಿಸಿದ್ದರು. ಇಲ್ಲಿ ಮಕ್ಕಳು ಸಾಂಪ್ರದಾಯಿಕ ಉಡುಗೆ ತೊಟ್ಟು ಸಂತೆಯಲ್ಲಿ ವ್ಯಾಪಾರಿಗಳಾಗಿ ತರಕಾರಿ ವ್ಯಾಪಾರ ಮಾಡಿದರು. ಇದರಿಂದ ಬಂದ ಹಣವನ್ನು ಅನಾಥರಿಗೆ ಹಾಗೂ ಅಂಧ ಮಕ್ಕಳಿಗೆ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇನ್ನು ಶಾಲಾ ವಿದ್ಯಾರ್ಥಿನಿ ವೈಭವಿ ಮಾತನಾಡಿ, ನಮ್ಮನ್ನು ಸಾಕುವುದಕ್ಕೆ ನಮ್ಮ ತಂದೆ-ತಾಯಿಗಳಿದ್ದಾರೆ. ಆದರೆ ಅನಾಥ ಮಕ್ಕಳನ್ನು ನೋಡಿಕೊಳ್ಳುವವರು ಯಾರು? ಅವರಿಗೆ ಊಟ, ಶಿಕ್ಷಣವನ್ನು ಕೊಡಿಸುವವರು ಯಾರು ಎಂಬುವುದನ್ನು ನಾವು, ನೀವೆಲ್ಲಾ ಯೋಚಿಸಬೇಕಿದೆ. ಅದಕ್ಕಾಗಿ ನಮ್ಮ ಶಾಲೆಯಲ್ಲಿ ನಾವು ತರಕಾರಿಗಳನ್ನು ತೆಗೆದುಕೊಂಡು ಬಂದಿದ್ದೇವೆ. ಆ ತರಕಾರಿಗಳನ್ನು ಗ್ರಾಹಕರಿಗೆ ಮಾರಾಟ ಮಾಡುತ್ತೇವೆ. ಅದರಲ್ಲಿ ಬಂದಿರುವ ಹಣವನ್ನು ಅನಾಥ ಮಕ್ಕಳಿಗೆ ನೀಡುತ್ತೇವೆ ಎಂದರು.