ಹೊಸಪೇಟೆ: ಗಣೇಶ ಹಬ್ಬವನ್ನು ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣಪನೊಂದಿಗೆ ಆಚರಿಸಿ. ಆ ಮೂಲಕ, ಮಾಲಿನ್ಯ ರಹಿತ ವಾತಾವರಣಕ್ಕೆ ಕೈ ಜೋಡಿಸಿ ಎಂದು ಅರಣ್ಯ ಸಚಿವ ಆನಂದ ಸಿಂಗ್ ಮನವಿ ಮಾಡಿಕೊಂಡಿದ್ದಾರೆ.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಕೋವಿಡ್-19 ಸಂದರ್ಭದಲ್ಲಿನ ಗಣೇಶ ಹಬ್ಬದ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು, ಅರಿಶಿಣ ಗಣಪ ಪರಿಸರಸ್ನೇಹಿ ಗಣಪತಿಯ ಹೊಸ ವಿಧದ ಪರಿಕಲ್ಪನೆಯಾಗಿದೆ. ಏಕೆಂದರೆ ಅರಿಶಿಣದಲ್ಲಿ ರೋಗ ನಿರೋಧಕ ಶಕ್ತಿ ಹಾಗೂ ಔಷಧ ಗುಣಗಳಿವೆ. ಹೀಗಾಗಿಯೇ ಅರಿಶಿಣ, ಪೂಜೆ ಹಾಗೂ ಅಡುಗೆ ಮನೆಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಹೀಗಾಗಿ ಈ ಬಾರಿ ಮಣ್ಣಿನೊಂದಿಗೆ ಅರಿಶಿಣದಿಂದಲೂ ಗಣೇಶನ ಮೂರ್ತಿ ತಯಾರಿಸಿ ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಮಾಡಬೇಕು.
ವಿನಾಯಕ ನಿಮಜ್ಜನದ ವೇಳೆಯೂ ಹೊರಗೆಲ್ಲೂ ಮಾಡದೇ ಮನೆಯಲ್ಲೇ ನಿಮಜ್ಜನ ಮಾಡಬೇಕು. ಆ ಮೂಲಕ ಆರೋಗ್ಯಪೂರ್ಣ ವಾತಾವರಣಕ್ಕೆ ಜನರು ಕೈ ಜೋಡಿಸಬೇಕು ಎಂದು ಈ ವೇಳೆ ಮನವಿ ಮಾಡಿಕೊಂಡಿದ್ದಾರೆ.