ಬಳ್ಳಾರಿ: ಕೊರೊನಾ ವೈರಸ್ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಅಂದಾಜು 400ಕ್ಕೂ ಅಧಿಕ ಮಂದಿಯನ್ನು ಕೊರೊನಾ ವೈರಸ್ ಶಂಕೆಯಿಂದ ಗೃಹಬಂಧನದಲ್ಲಿ ಇರಿಸಲಾಗಿದೆ. ಅವರೇನಾದ್ರೂ ಹೊರಗಡೆ ಬಂದ್ರೆ ಕೇಸ್ ದಾಖಲಿಸುವುದಾಗಿ ಎಸ್ಪಿ ಸಿ.ಕೆ. ಬಾಬಾ ಖಡಕ್ ಆಗಿ ಎಚ್ಚರಿಸಿದ್ದಾರೆ.
ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊರದೇಶದ ನಾನಾ ಭಾಗಗಳಿಂದ ಜಿಲ್ಲೆಗೆ ಬಂದವರನ್ನು ಗೃಹಬಂಧನದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರೇನಾದ್ರೂ ಸಾರ್ವಜನಿಕವಾಗಿ ಕಾಣಿಸಿಕೊಂಡ್ರೆ ಕೊರೊನಾ ವೈರಸ್ ಹರಡುವ ಸಾಧ್ಯತೆಯಿದೆ. ಹೀಗಾಗಿ ಅವರು ಯಾವ ಕಾರಣಕ್ಕೂ ಹೊರಗಡೆ ಬರುವಂತಿಲ್ಲ. ಹಾಗೊಂದು ವೇಳೆ ಅವರು ಹೊರಗಡೆ ಕಾಣಿಸಿಕೊಂಡಿದ್ದೇ ಆದಲ್ಲಿ, ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾವುದು ಎಂದಿದ್ದಾರೆ.
ಮಾರ್ಚ್ 5ರಿಂದ ಮತ್ತಷ್ಟು ಮಂದಿ ಹೊರದೇಶದಿಂದ ಜಿಲ್ಲೆಗೆ ಆಗಮಿಸಿರುವ ಮಾಹಿತಿಯಿದೆ. ಅದನ್ನು ಕೂಡ ಕಲೆ ಹಾಕಲಾಗುತ್ತದೆ. ಶೀಘ್ರವೇ ಅವರಿಗೂ ಗೃಹಬಂಧನದಲ್ಲಿರುವಂತೆ ಸೂಚನೆ ನೀಡಲಾಗುವುದು. ಜೊತೆಗೆ ಹಂಪಿ ಹಾಗೂ ಹೊಸಪೇಟೆ ಭಾಗದಲ್ಲಿ ಅಂದಾಜು 14 ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದ್ದು, ನೆರೆ ರಾಜ್ಯಗಳಿಂದ ಬರುವ ಪ್ರಯಾಣಿಕರನ್ನು ಸ್ಕ್ರೀನಿಂಗ್ ಮಾಡಿ ಜಿಲ್ಲೆಯ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದಿದ್ದಾರೆ.