ಬಳ್ಳಾರಿ: ನಗರಾಭಿವೃದ್ಧಿ ಇಲಾಖೆ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ಹಾಗೂ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಬಳ್ಳಾರಿ ನಗರದ ನಿರಂತರ ಕುಡಿಯುವ ನೀರು ಸರಬರಾಜು ಯೋಜನೆಯ 12 ವಲಯಗಳನ್ನು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಇಂದು ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿದ ಸಚಿವ ಭೈರತಿ ಬಸವರಾಜ್, 12 ವಲಯಗಳನ್ನು ಉದ್ಘಾಟಿಸುತ್ತಿರುವುದು ಸಂತೋಷ ತಂದಿದೆ. ಇನ್ನೂ 15 ವಲಯಗಳನ್ನು ಡಿ. 31ರಂದು ಲೋಕಾರ್ಪಣೆಗೊಳಿಸಲಾಗುವುದು. ಬಳ್ಳಾರಿ ನಗರದಲ್ಲಿ ಹಳೇ ಚರಂಡಿ ವ್ಯವಸ್ಥೆ ಇದ್ದು, ಜಿಲ್ಲಾ ಖನಿಜ ನಿಧಿ ಅಡಿ ಸದ್ಯದ ಜನಸಂಖ್ಯೆಗೆ ಅನುಗುಣವಾಗಿ 221 ಕೋಟಿ ರೂ. ವೆಚ್ಚದ ಒಳಚರಂಡಿ ವ್ಯವಸ್ಥೆ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಘವೇಂದ್ರ ಕಾಲೋನಿ, ತಾರಾನಾಥ, ಗೋನಾಳು, ಬಿಸಿಲಳ್ಳಿ, ದೊಡ್ಡಮಾರುಕಟ್ಟೆ, ಸತ್ಯನಾರಾಯಣಪೇಟೆ, ಬಸವೇಶ್ವರನಗರ, ಮಿಲ್ಲರಪೇಟೆ, ರಾಮಯ್ಯ ಕಾಲೋನಿ, ಬಿಸಿಲಹಳ್ಳಿ ಆಶ್ರಯಕಾಲೋನಿ, ವೆಂಕಟರಮಣ ಕಾಲೋನಿ, ವಾಜಪೇಯಿ ಲೇಔಟ್‍ಗೆ ಇನ್ಮುಂದೆ ನಿರಂತರವಾಗಿ ಕುಡಿಯುವ ನೀರು ಸರಬರಾಜು ಆಗಲಿದೆ.
ಶಾಸಕ ಸೋಮಶೇಖರ್ ರೆಡ್ಡಿ ಮಾತನಾಡಿ, 2008ರಲ್ಲಿಯೇ ನಿರಂತರ ಕುಡಿಯುವ ನೀರು ಸರಬರಾಜಿನ ಕನಸು ಕಂಡಿದ್ದೆ. ಈಗ ನನಸಾಗುತ್ತಿರುವುದು ಸಂತೋಷ ತಂದಿದೆ. ಇನ್ನುಳಿದ ವಲಯಗಳಿಗೂ ಶೀಘ್ರವಾಗಿ ನೀರನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.