ಬಳ್ಳಾರಿ: ತಾಲೂಕಿನ ಹಲಕುಂದಿ ಗ್ರಾಮದ ರೈತ ಕುಟುಂಬಕ್ಕೆ ಸೇರಿದ ಸಹೋದರರಿಬ್ಬರು ಕೇವಲ 13 ಗಂಟೆಯೊಳಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಹಲಕುಂದಿ ಗ್ರಾಮದ ಹೊನ್ನಳ್ಳಿ ರಸ್ತೆಯ ಗುಂತಕಲ್ಲೇಶ್ವರ ದೇಗುಲ ಸಮೀಪದ ನಿವಾಸಿ ಬಸಪ್ಪ-ದುರ್ಗಮ್ಮ ದಂಪತಿಯ ಪುತ್ರರಾದ ಕೆ. ಸಿದ್ದೇಶ (22) ಹಾಗೂ ಕೆ. ದೊಡ್ಡಬಸಪ್ಪ (25) ಸಾವಿಗೀಡಾದ ಸಹೋದರರು.
ಘಟನೆಯ ವಿವರ:
ಮಿಲ್ ಗುಮಾಸ್ತನಾಗಿದ್ದ ಕೆ. ಸಿದ್ದೇಶ, ನಿನ್ನೆ ಮಹಡಿ ಮೇಲೆ ಮಲಗಿದ್ದಾಗ ನಡುರಾತ್ರಿ 12 ಗಂಟೆ ವೇಳೆಗೆ ರಕ್ತದೊತ್ತಡ ಏರುಪೇರಾಗಿ ಎದೆನೋವು ಕಾಣಿಸಿಕೊಂಡಿದೆ. ಹಾಗೂ ಪಾರ್ಶ್ವವಾಯು ಹೊಡೆದ ಪರಿಣಾಮ ಕೂಡಲೇ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದು, ಮಾರ್ಗ ಮಧ್ಯದಲ್ಲೇ ಸಿದ್ದೇಶ ಸಾವನ್ನಪ್ಪಿದರು.
ಸಾವಿನ ವಿಚಾರವನ್ನು ಬೆಂಗಳೂರಿನಲ್ಲಿ ಸಿವಿಲ್ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೃತರ ಸಹೋದರ ದೊಡ್ಡಬಸಪ್ಪನವರಿಗೆ ತಿಳಿಸಿದ್ದಾರೆ. ಈ ವಿಷಯ ತಿಳಿದ ಕೂಡಲೇ ತರಾತುರಿಯಲ್ಲಿ ಬೆಂಗಳೂರಿನಿಂದ ಹೊರಟ ದೊಡ್ಡಬಸಪ್ಪನವರು, ನೇರವಾಗಿ ಮನೆಗೆ ಬಂದಿದ್ದಾರೆ.
ಇದನ್ನೂ ಓದಿ: ದಾವಣಗೆರೆ: ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ
ಇಂದು ಮಧ್ಯಾಹ್ನದ ಹೊತ್ತಿಗೆ ಸಹೋದರ ಸಿದ್ದೇಶ ಅವರ ಅಂತ್ಯಕ್ರಿಯೆ ನೆರವೇರಿಸಿ ವಾಪಸ್ ಬರುವ ವೇಳೆ ದೊಡ್ಡಬಸಪ್ಪ ಅವರಿಗೂ ಎದೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಕೊಂಡೊಯ್ಯುವಾಗ ಇವರು ಕೂಡ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.