ಬಳ್ಳಾರಿ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೊದ್ಲಗಟ್ಟೆ ಆಂಜನೇಯಸ್ವಾಮಿ ದೇಗುಲ ಬಳಿಯ ತುಂಗಭದ್ರಾ ಜಲಾಶಯಕ್ಕೆ ಕಟ್ಟಲಾಗಿರುವ ಸೇತುವೆ ಇಂದು ಬೆಳಗಿನ ಜಾವ ದಿಢೀರ್ ಕುಸಿದಿದೆ.
ಜಿಲ್ಲೆಯ ಹಡಗಲಿ-ಗದಗ ಮಾರ್ಗದಲ್ಲಿರುವ ಈ ಬ್ರಿಡ್ಜ್ ಮಧ್ಯ ಭಾಗದಲ್ಲಿ ಏಕಾಏಕಿ ಕಂದಕ ಸೃಷ್ಟಿಯಾಗಿ ಭಾರೀ ಬಿರುಕು ಬಿಟ್ಟ ಪರಿಣಾಮ ಲಾರಿ ಮತ್ತು ಕಾರುಗಳು ಜಖಂಗೊಂಡಿವೆ. 2002ರಲ್ಲಿ ನಿರ್ಮಾಣಗೊಂಡಿದ್ದ ಈ ಬ್ರಿಡ್ಜ್ ಸಾಕಷ್ಟು ಶಿಥಿಲಾವಸ್ಥೆಯಲ್ಲಿದ್ದರೂ ಕೂಡ ಲೋಕೋಪಯೋಗಿ ಇಲಾಖೆ ಮಾತ್ರ ಇತ್ತ ಗಮನ ಹರಿಸಿರಲಿಲ್ಲ. ಈ ಸೇತುವೆ ಪುನರ್ ನವೀಕರಣದ ಬಗ್ಗೆ ಅನೇಕ ಬಾರಿ ದೂರು ಸಲ್ಲಿಸಿದ್ದರೂ ಸಹ ಯಾರೂ ಕೂಡ ಸ್ಪಂದಿಸಿಲ್ಲ ಎನ್ನಲಾಗ್ತಿದೆ.
ಇಂದು ಬೆಳ್ಳಂಬೆಳಗ್ಗೆ ಬ್ರಿಡ್ಜ್ ಕುಸಿದಿದ್ದು, ಲಾರಿ ಮತ್ತು ಕಾರು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಳಗಿನ ಜಾವ ಆಗಿದ್ದರಿಂದ ಸಂಚಾರ ಕಡಿಮೆ ಇತ್ತು. ಹೀಗಾಗಿ, ದೊಡ್ಡಮಟ್ಟದ ಅವಘಡ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆಯ ನಂತರ ಲೋಕೋಪಯೋಗಿ ಇಲಾಖೆಯ ಎಂಜನಿಯರ್ಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.