ಬಳ್ಳಾರಿ: ರಾಜ್ಯದಲ್ಲಿ ಮತ್ತೊಮ್ಮೆ ಕೃಷ್ಣದೇವರಾಯನ ಆಳ್ವಿಕೆ ಬರಬೇಕಾದರೇ ಟಿಪ್ಪು ಸಂತಾನ ಹೋಗಬೇಕು. ಜನರು ಕೃಷ್ಣದೇವರಾಯನ ಆರಾಧನೆ ಮಾಡುತ್ತಾರೆ. ಬದಲಾಗಿ ಟಿಪ್ಪುವಿನ ಆರಾಧನೆಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.
ಜಿಲ್ಲೆಯ ಕಂಪ್ಲಿಯಲ್ಲಿ ಸೋಮವಾರ ಸಂಜೆ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, "ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರು ನಿರುದ್ಯೋಗಿ ಆಗುತ್ತಾರೆ. ಬಿಜೆಪಿ ಪಕ್ಷದ ಹಡಗು ತುಂಬುತ್ತಿದೆ, ಕಾಂಗ್ರೆಸ್ ಹಡಗು ಮುಳುಗುತ್ತಿದೆ. ಬಿ.ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಅಭಿವೃದ್ಧಿ ಆಗುತ್ತಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಇಬ್ಬರು ಸಿಎಂ ಹುದ್ದೆಗಾಗಿ ಜಗಳ ಮಾಡುತ್ತಿದ್ದಾರೆ. ಆದರೆ ಇವರಿಬ್ಬರನ್ನು ಮನೆಗೆ ಕಳುಹಿಸಿ ಖರ್ಗೆ ಅವರು ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ" ಎಂದು ವ್ಯಂಗ್ಯವಾಡಿದರು.
"ನೀವು ಕಾರ್ಯಕರ್ತರ ಧ್ವನಿ ಅಡಗಿಸಿದ್ದೀರಿ, ಆದರೂ ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದೀರ. ಡಿ.ಕೆ ಶಿವಕುಮಾರ್ ಅವರಿಗೆ ಪಕ್ಷದ ಪದಾಧಿಕಾರಿಗಳ ಸಭೆ ಸಹ ಮಾಡಲು ಆಗಲಿಲ್ಲ. ಅಲ್ಲದೇ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರೇ ಇಲ್ಲ. ಕಾಂಗ್ರೆಸ್ ನಾಯಕರು ಪಕ್ಷದಲ್ಲಿ ಕಾರ್ಯಕರ್ತರ ಧ್ವನಿ ಅಡಗಿಸಿದ್ದಾರೆ. ಇಂದಿರಾಗಾಂಧಿ ಕಾಲಘಟ್ಟದಲ್ಲಿ ಚುನಾವಣೆಗೆ ಕಾಂಗ್ರೆಸ್ನಿಂದ ಲೈಟ್ ಕಂಬ ನಿರ್ಮಿಸಿದರೂ ಗೆಲುವು ಸಾಧಿಸುತ್ತಿದ್ದ ಸಂದರ್ಭವೊಂದಿತ್ತು. ಆದರೆ ಇವತ್ತು ರಾಹುಲ್ ಗಾಂಧಿ ವೈನಾಡಿನಲ್ಲಿ ಬಂದು ಸ್ಪರ್ಧೆ ಮಾಡಬೇಕಾಯಿತು. ಇವತ್ತು ರಾಜ್ಯದಲ್ಲಿ ಸಿದ್ದರಾಮಯ್ಯ ಅವರಿಗೂ ಕ್ಷೇತ್ರ ಇಲ್ಲದಾಗಿದೆ. ಆದರೂ ಮುಖ್ಯಮಂತ್ರಿ ಆಗಲು ಹೊರಟ್ಟಿದ್ದಾರೆ" ಎಂದು ಟಾಂಗ್ ನೀಡಿದರು.
"ಸಿದ್ದರಾಮಯ್ಯಗೆ ಸವಾಲು ಹಾಕುತ್ತಿದ್ದೇನೆ. ಅವರಿಗೆ ತಾಕತ್ತಿದ್ರೆ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿ. ನಾವು ನಮ್ಮ ಪಕ್ಷದ ತಾಕತ್ತು ತೋರಿಸುತ್ತೇವೆ. ಇನ್ನು ಭಾರತ್ ಜೋಡೋ ಯಾತ್ರೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರು, ರಾಹುಲ್ ಗಾಂಧಿ ಅಲ್ಲ. ವಿವೇಕಾನಂದರು ಕನಸು ಕಂಡ ಹಾಗೆ ದೇಶ ಬದಲಾಗುತ್ತಿದೆ" ಎಂದರು.
ಇದನ್ನೂ ಓದಿ: ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ನಿಗದಿಯಂತೆ 60 ರೂ. ಶುಲ್ಕ : ಸಚಿವ ನಾಗೇಶ್
ಬಳಿಕ ಸಚಿವ ಆನಂದ್ ಸಿಂಗ್ ಮಾತನಾಡಿ, "ಚುನಾವಣೆ ಬಂದಾಗ ಇಲ್ಲ ಸಲ್ಲದ ಆಶ್ವಾಸನೆ ನೀಡಿ ಮತ ಕೇಳುವ ಪಕ್ಷ ನಮ್ಮದಲ್ಲ. ಯಾವತ್ತಿದ್ದರೂ ದೇಶ ಕಟ್ಟುವ ಪಕ್ಷ ಬಿಜೆಪಿ. ಚುನಾವಣೆಗಾಗಿ ಸಮಾವೇಶಗಳನ್ನು ಮಾಡುವ ಪಕ್ಷ ಕಾಂಗ್ರೆಸ್ ಆಗಿದೆ. ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಯಾಕೆ ಮಾಡಿದ್ದರೋ ಗೊತ್ತಿಲ್ಲ. ಯಾತ್ರೆ ನಡೆಸಿ ಏನು ಕಡೆದು ಗುಡ್ಡೆ ಹಾಕಿದ್ದಾರೋ ಗೊತ್ತಾಗುತ್ತಿಲ್ಲ. ಈ ಯಾತ್ರೆಯಿಂದ ಏನೂ ಬದಲಾಗಿಲ್ಲ. ರಾಹುಲ್ ಗಾಂಧಿ ಗಡ್ಡ ಬಿಟ್ಟಿರುವುದು ಬಿಟ್ರೆ ಮತ್ತೇನು ಇಲ್ಲ" ಎಂದು ಕಿಚಾಯಿಸಿದರು.
"ಕಾಶ್ಮೀರದಲ್ಲಿ ಇವತ್ತು ವಿಶಾಲವಾದ ಪ್ರದೇಶದಲ್ಲಿ ಕಾಂಗ್ರೆಸ್ ಜೋಡೋ ಯಾತ್ರೆ ಕಾರ್ಯಕ್ರಮವನ್ನು ಮಾಡಿದ್ದಾರೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಆರ್ಟಿಕಲ್ 370 ಅನ್ನು ರದ್ದುಪಡಿಸಿದ ಕಾರಣ ಕಾಶ್ಮೀರದಲ್ಲಿ ಕಾರ್ಯಕ್ರಮ ಮಾಡಲು ಸಾಧ್ಯವಾಯ್ತು. ಇಲ್ಲದಿದ್ದಲ್ಲಿ ಕಾಂಗ್ರೆಸ್ ನಾಯಕರು ಕಾಶ್ಮೀರದ ಗಡಿಯವರೆಗೂ ಹೋಗುತ್ತಿರಲಿಲ್ಲ. ಗಡಿಯಲ್ಲಿಯೇ ಅವರನ್ನು ಅಲ್ಲಿನ ಜನರು ಎಗರಿಸಿ ಬಿಡುತ್ತಿದ್ದರು" ಎಂದರು.
"ಕಾಂಗ್ರೆಸ್ದ್ದು ಜೋಡೋ ಯಾತ್ರೆಯಲ್ಲ, ತೋಡೋ ಯಾತ್ರೆ. ಕ್ಷೇತ್ರದ ಅಭಿವೃದ್ಧಿಗಳ ಬಗ್ಗೆ ಯೋಚನೆ ಇಲ್ಲದ ಕಾಂಗ್ರೆಸ್ ನಾಯಕರಿಂದ ದೇಶದ ಅಭಿವೃದ್ಧಿ ಹೇಗೆ ಸಾಧ್ಯ? ಬಿಜೆಪಿ ಗೆಲ್ಲಿಸಿ ಅಂತ ಸಿದ್ದರಾಮಯ್ಯನವರೇ ಮೊನ್ನೆ ಹೇಳಿದ್ರು. ಅವರೇನು ಮಾತಾಡ್ತಾರೋ ಅವರಿಗೆ ಗೊತ್ತಿಲ್ಲ. ಮೋದಿ ವಿಶ್ವಗುರು, ಅವರು ಪ್ರಧಾನಿಯಾಗಿದ್ದು ಪರಮಾತ್ಮ ಕೊಟ್ಟ ಕೊಡುಗೆಯಾಗಿದೆ. ಗುಂಡಿಗೆ ಇಲ್ಲದ ಗಂಡುಗಳು ಕಾಂಗ್ರೆಸ್‌ನಲ್ಲಿದ್ದಾರೆ. ನಮ್ಮಲ್ಲಿ ಗುಂಡಿಗೆ ಇರುವಂತಹ ನಾಯಕರಿದ್ದಾರೆ" ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಟಿ.ಎಚ್ ಸುರೇಶ್, ಪುರಸಭೆ ಅಧ್ಯಕ್ಷೆ ಶಾಂತಲಾ, ಉಪಾಧ್ಯಕ್ಷೆ ನಿರ್ಮಲಾ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಆರ್. ಹನುಮಂತ, ಸಿದ್ದೇಶ್ ಯಾದವ್, ಸಿದ್ದರಾಜು, ಮುರಹರಿಗೌಡ, ವಿರೂಪಾಕ್ಷಿಗೌಡ, ಚಂದ್ರಶೇಖರ್ ಪಾಟೀಲ್ ಅಲಿಗೇರಿ, ಅಳ್ಳಳ್ಳಿ ವೀರೇಶ್, ಜಿ. ಸುಧಾಕರ್, ಪಿ. ಬ್ರಹ್ಮಯ್ಯ, ಪುರುಷೋತ್ತಮ, ಬಿ. ಸಿದ್ದಪ್ಪ ಇದ್ದರು.
ಇದನ್ನೂ ಓದಿ: ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಆರೋಪ.. ಶಾಸಕ ನೆಹರು ಓಲೇಕಾರ್, ಮತ್ತವರ ಇಬ್ಬರು ಮಕ್ಕಳಿಗೆ ಜೈಲು ಶಿಕ್ಷೆ
ಗಂಗಾವತಿಯಲ್ಲಿ ಕಟೀಲ್ ಹೇಳಿಕೆ : ರಾಜ್ಯದ ವಿಧಾನಸಭೆಯೊಳಗೆ ಯಾರಿರಬೇಕು? ಆಂಜನೇಯನ ಭಕ್ತನೋ ಅಥವಾ ಟಿಪ್ಪು ಭಕ್ತನೋ ಎಂಬುವುದು ಈ ಚುನಾವಣೆಯಲ್ಲಿ ನೀವೇ ನಿರ್ಧರಿಸಬೇಕು. ಇದಕ್ಕಾಗಿ ನೀವು ಸಂಕಲ್ಪ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗಂಗಾವತಿಯಲ್ಲಿ ಹೇಳಿದರು. ಮಂಗಳವಾರ ಸಂಜೆ ನಡೆದ ಬಿಜೆಪಿ ವಿಜಯಸಂಕಲ್ಪ ಯಾತ್ರೆಯ ಭಾಗವಾಗಿ ಪೇಜ್ ಪ್ರಮುಖರ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಧಾನಸಭೆಯಲ್ಲಿ ಆಂಜನೇಯನ ಭಕ್ತನಿರಬೇಕಾದರೆ ಟಿಪ್ಪುವಿನ ಭಕ್ತ ಸಿದ್ದರಾಮಣ್ಣ ಎಲ್ಲಿಗೆ ಹೋಗಬೇಕು? ಅವರನ್ನು ಕಾಡಿಗೆ ಕಳಿಸಬೇಕು. 2023ರ ಚುನಾವಣೆಯಲ್ಲಿ ಸಿದ್ದುಗೆ ಕಾಡಿಗೆ ಕಳಿಸೋಣ ಎಂದು ಬಿಜೆಪಿ ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಐದು ವರ್ಷ ರಾಜ್ಯದಲ್ಲಿ ಅಧಿಕಾರ ಮಾಡಿರುವ ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯಗೆ ಈ ರಾಜ್ಯದಲ್ಲಿ ಒಂದೇ ಒಂದು ಕ್ಷೇತ್ರ ಸಿಗುತ್ತಿಲ್ಲ. ಸಿದ್ದರಾಮಯ್ಯ ಅವರು ತಾಕತ್ ಇದ್ದರೆ ಬದಾಮಿಯಲ್ಲಿ ಸ್ಪರ್ಧಿಸಲಿ ಎಂದು ನಳೀನ್ ಕುಮಾರ್ ಸವಾಲು ಹಾಕಿದರು.
ಸಿದ್ದರಾಮಯ್ಯಗೆ ವರುಣಾದಲ್ಲಿ ಸೋಲಾಗಿದೆ. ಬದಾಮಿಯಲ್ಲಿ ಜನ ಓಡಿಸುತ್ತಿದ್ದಾರೆ. ಸೋಲಿನ ಭೀತಿ ಎದುರಾಗಿದೆ. ಕೋಲಾರದಲ್ಲಿ ಮುನಿಯಪ್ಪ ಮುನಿಸಿಕೊಂಡಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ನಿರಂತರ ಗಲಭೆಗೆ ಗಂಗಾವತಿ ನಲುಗಿತ್ತು. ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ಕ್ಷೇತ್ರವಿಲ್ಲದೇ ಪರದಾಡುತ್ತಿದ್ದಾರೆ. ಇದು ಕಾಂಗ್ರೆಸ್ ಸ್ಥಿತಿ. ಆದರೆ ಬಿಜೆಪಿಯ ಶಾಸಕ ಪರಣ್ಣ ಮುನವಳ್ಳಿ ಅಧಿಕಾರಕ್ಕೆ ಬಂದ ಬಳಿಕ ಈ ಕ್ಷೇತ್ರದಲ್ಲಿ ಕೋಮು ಗಲಭೆಗೆ ಅವಕಾಶ ನೀಡಿಲ್ಲ. ರಾಜ್ಯದಲ್ಲಿ ಬಾಂಬ್ ಸ್ಫೋಟ ಮಾಡುವ ಬೆಂಬಲಿಗರು, ಕೋಮು ಗಲಭೆಗೆ ಕುಮ್ಮಕ್ಕು ನೀಡುವವರು ಇರಬೇಕಾ? ಅಭಿವೃದ್ಧಿ ಪರವಾಗಿದ್ದವರು ಇರಬೇಕಾ? ನೀವೆ ನಿರ್ಧಾರ ಮಾಡಿ. ನಾವು ಪರಿವರ್ತನೆ ಕಾಲಘಟ್ಟದಲ್ಲಿದ್ದೇವೆ ಎಂದು ಕಟೀಲ್ ಹೇಳಿದರು.