ಬಳ್ಳಾರಿ: ಮಹಾನಗರ ಪಾಲಿಕೆ ವ್ಯಾಪ್ತಿಯ 39 ವಾರ್ಡ್ಗಳ ಪೈಕಿ 27 ವಾರ್ಡ್ಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅಭಿಪ್ರಾಯಪಟ್ಟಿದ್ದಾರೆ.
ಬಳ್ಳಾರಿ ನಗರದ ಎಸ್ಪಿ ವೃತ್ತದ ಬಳಿ ಇರುವ ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ವ್ಯಾಪ್ತಿಯ 39 ವಾರ್ಡ್ಗಳಲ್ಲಿ ಪ್ರತಿ ಮನೆ ಮನೆಗೂ ಭೇಟಿ ನೀಡಿ ಮತದಾರರ ಸಮಸ್ಯೆಗಳನ್ನ ಆಲಿಸುತ್ತಿದ್ದೇನೆ ಎಂದರು.
ಹಿಂದಿನ ಎರಡು ಬಾರಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಗರದ ಜನತೆ ಅವಕಾಶ ನೀಡಿದ್ದರು. ಅವತ್ತು ನಾವು ಸಾಧ್ಯವಾದಷ್ಟು ಕೆಲಸ ಮಾಡಿದ್ದೇವೆ. ಅಂದು ನಾವು ಮಾಡಿದ ಕೆಲಸ ಮತ್ತು ಬಳ್ಳಾರಿ ನಗರ ಶಾಸಕ ಸೋಮಶೇಖರರೆಡ್ಡಿ ಅವರನ್ನ ಇಂದಿಗೂ ಸ್ಮರಿಸುತ್ತಿದ್ದಾರೆ. ಬಹಳಷ್ಟು ಜನ ನಮ್ಮ ಪರವಾಗಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಕೂಡ ನಮ್ಮ ಸರ್ಕಾರದ ಇದೆ. ದಿಲ್ಲಿಯಿಂದ ಬಳ್ಳಾರಿ ಮಹಾನಗರ ಪಾಲಿಕೆ ತನಕ ಬಿಜೆಪಿ ಅಧಿಕಾರಕ್ಕೆ ಇರಬೇಕು ಎಂಬುದು ನಮ್ಮ ಆಶಯ. ಎಲ್ಲ ಸಮುದಾಯದವರು ಬಿಜೆಪಿಗೆ ಮತ ನೀಡಲು ಬಯಸುತ್ತಿದ್ದಾರೆ ಎಂದರು.
27 ವಾರ್ಡ್ಗಳಲ್ಲಿ ಬಿಜೆಪಿ ಗೆಲ್ಲುತ್ತದೆ. ಅದರ ಸಂಪೂರ್ಣ ವಿಶ್ವಾಸ ನನಗಿದೆ. ಬೀದಿ ಬದಿಯಲ್ಲಿ ವ್ಯಾಪಾರ ಮಾಡುವಂತವರು ತೆರಿಗೆ ಕಡಿಮೆ ಮಾಡಬೇಕು ಎಂದು ಕೇಳುತ್ತಿದ್ದಾರೆ. ಅದರಂತೆಯೇ ಕಡಿಮೆ ಮಾಡುವ ಪ್ರಯತ್ನ ಮಾಡುತ್ತೇನೆ. ಕುಡಿಯುವ ನೀರಿನ ತೆರಿಗೆ ಕಡಿತ ಮಾಡಲಾಗುವುದು ಎಂದರು.
39 ವಾರ್ಡ್ಗಳಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು, ಒಳ ಚರಂಡಿಗೆ 253 ಕೋಟಿ ರೂ. ಮೀಸಲಿರಿಸಲಾಗಿದೆ. ಪ್ರತಿ ವಾರ್ಡ್ನಲ್ಲಿ ಜನಸಂಪರ್ಕ ಕೇಂದ್ರ ನಿರ್ಮಿಸಲಾಗುವುದು ಎಂದರು.
ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಮಾಜಿ ಸಂಸದೆ ಜೆ.ಶಾಂತ, ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಅಧ್ಯಕ್ಷ ಎಚ್.ಹನುಮಂತಪ್ಪ, ಬಿಜೆಪಿಯ ರೈತ ಮೋರ್ಚಾದ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಗುರುಲಿಂಗನಗೌಡರು, ಬಿಜೆಪಿ ಯುವ ಮುಖಂಡ ಅನಿಲ್ ನಾಯ್ಡು ಇದ್ದರು.