ಹೊಸಪೇಟೆ : ಗ್ರಾಮ ಪಂಚಾಯತ್ ಚುನಾವಣೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ಸದ್ದಿಲ್ಲದೇ ತಯಾರಿ ನಡೆಸಿದೆ. ಎರಡು ಪಕ್ಷಗಳು ಗೆಲುವಿಗಾಗಿ ರಣತಂತ್ರವನ್ನು ಹೂಡುತ್ತಿದ್ದು, ಗ್ರಾಮ ಪಂಚಾಯತ್ ಫಲಿತಾಂಶದ ಬಳಿಕ ಯಾರ ತಂತ್ರಗಳು ಫಲಿಸಿವೆ ಎಂಬುದು ತಿಳಿಯಲಿದೆ.
ಬಿಜೆಪಿ ಪಕ್ಷವು ಉಪಮುಖ್ಯಮಂತ್ರಿ ಸವದಿ, ಸಮಾಜ ಕಲ್ಯಾಣ ಇಲಾಖೆಯ ಸಚಿವ ಬಿ.ಶ್ರೀರಾಮುಲು, ಅರಣ್ಯ ಖಾತೆಯ ಸಚಿವ ಆನಂದ್ ಸಿಂಗ್ ಅವರ ನೇತೃತ್ವದಲ್ಲಿ ಗ್ರಾಮ ಸ್ವರಾಜ್ಯ ಮಾಡುವ ಮೂಲಕ ಗ್ರಾಮ ಪಂಚಾಯತ್ ಚುನಾವಣೆಗೆ ಭರ್ಜರಿ ಆರಂಭ ನೀಡಿದರು. ಕಾಂಗ್ರೆಸ್ ಪಕ್ಷ ವಿಧಾನ ಪರಿಷತ್ ಸದಸ್ಯ ಕೆ ಸಿ ಕೊಂಡಯ್ಯ ಅವರನ್ನು ವೀಕ್ಷಕರನ್ನಾಗಿ ನೇಮಿಸಿದೆ. ಎರಡು ಪಕ್ಷಗಳು ಗೆಲುವಿಗಾಗಿ ಚುನಾವಣಾ ಅಖಾಡದಲ್ಲಿ ಕಸರತ್ತು ನಡೆಸಿವೆ.
ಕಾಂಗ್ರೆಸ್ ತಂತ್ರಗಾರಿಕೆ : ಕಾಂಗ್ರೆಸ್ ಪಕ್ಷ ಬಿಜೆಪಿ ಸರ್ಕಾರ ಆಡಳಿತ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಲು ಮುಂದಾಗಿದೆ. ಮೂರು ಹೊಸ ಕೃಷಿ ತಿದ್ದುಪಡಿ ಮಸೂದೆಗಳು ರೈತರಿಗೆ ಮಾರಕವಾಗಿವೆ. ಅವುಗಳಿಂದ ರೈತರು ಸಂಕಷ್ಟ ಅನುಭವಿಸಲಿದ್ದಾರೆ. ಬಿಜೆಪಿ ಪಕ್ಷಕ್ಕೆ ಆಡಳಿತ ಮಾಡುವುದಕ್ಕೆ ಬರುವುದಿಲ್ಲ. ಇದು ಕಾಂಗ್ರೆಸ್ಗೆ ವರವಾಗಲಿದೆ ಎಂಬುದು ಕಾಂಗ್ರೆಸ್ ನಾಯಕರ ಲೆಕ್ಕಚಾರವಾಗಿದೆ.
ಬಿಜೆಪಿ ತಂತ್ರಗಾರಿಕೆ : ಈಗಾಗಲೇ ಬಿಜೆಪಿ ಸರಣಿ ಸಭೆ ನಡೆಸಿ ಗೆಲುವಿಗಾಗಿ ರಣತಂತ್ರ ಹೂಡಿದೆ. ಆದರೆ, ಗೆಲುವಿನ ತಂತ್ರಗಳನ್ನು ಬಜೆಪಿ ಬಹಿರಂಗಗೊಳಿಸುತ್ತಿಲ್ಲ. ಗೆಲುವಿಗಾಗಿ ಸಕಲ ಸಿದ್ಧತೆ ಮಾಡಿಕೊಂಡಿದೆ. ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯರ ಮಾರ್ಗದರ್ಶನದಂತೆ ಚುನಾವಣೆ ಮಾಡಲಾಗುವುದು. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಒಂದು ಕ್ಷೇತ್ರಕ್ಕೆ 4-5 ಜನರು ಮುಂದೆ ಬರುತ್ತಿದ್ದಾರೆ. ಇದು ಗೆಲುವಿಗೆ ಮುನ್ನಡೆ ಎಂಬುದು ನಾಯಕರ ವಿಶ್ವಾಸವಾಗಿದೆ.
ಹೊಸಪೇಟೆ ಗ್ರಾಮ ಪಂಚಾಯತ್‌ಗಳ ಸ್ವರೂಪ : ತಾಲೂಕಿನಲ್ಲಿ 13 ಗ್ರಾಪಂ ಇವೆ. ನಾಗೇನಹಳ್ಳಿ, ಮಲಪನಗುಡಿ, ಹಂಪಿ, ಗಾದಿಗನೂರ, ಪಿ ಕೆ ಹಳ್ಳಿ, 114 ಡಣಾಪುರ, ಜಿ.ನಾಗಲಾಪುರ, ಡಿ ಎನ್ ಕೆರೆ, ಚಿಲಕನಹಟ್ಟಿ, ಬುಕ್ಕಸಾಗರ, ಬೈಲುವದ್ದಗೇರಿ, ಕಲ್ಲಹಳ್ಳಿ, ಹೊಸೂರು ಗ್ರಾಮ ಪಂಚಾಯತ್‌ಗಳು ಬರುತ್ತವೆ. ತಾಲೂಕಿನ ಗ್ರಾಪಂಗಳಲ್ಲಿ ಒಟ್ಟು 274 ಸ್ಥಾನ ಬರುತ್ತವೆ.
ಈಗಾಗಲೇ 41 ಸ್ಥಾನಗಳಿಗೆ ಅವಿರೋಧ ಆಯ್ಕೆ ಮಾಡಲಾಗಿದೆ. 233 ಸ್ಥಾನಗಳಿಗೆ ಚುನಾವಣೆ ನಡೆಯಬೇಕಾಗಿದೆ. ಈ ಚುನಾವಣೆಯಲ್ಲಿ ಒಟ್ಟು 928 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ 7 ತಿರಸ್ಕೃತಗೊಂಡಿದ್ದವು. 227 ನಾಮಪತ್ರ ಹಿಂಪಡೆಯಲಾಗಿತ್ತು. ಈಗ ಸದ್ಯ 653 ಅಭ್ಯರ್ಥಿಗಳು ಕಣದಲ್ಲಿ ಸ್ಪರ್ಧೆ ಮಾಡಲಿದ್ದಾರೆ.
ಈಟಿವಿ ಭಾರತ್ನೊಂದಿಗೆ ಹೊಸಪೇಟೆಯ ಬಿಜೆಪಿ ಮಂಡಲ ಅಧ್ಯಕ್ಷ ಬಸವರಾಜ ನಲತ್ವಾಡ್ ಅವರು ಮಾತನಾಡಿ, ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸನ್ನದ್ಧರಾಗಿದ್ದೇವೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಲು ಒಂದು ಸ್ಥಾನಕ್ಕೆ 4-5 ಜನ ಬರುತ್ತಿದ್ದಾರೆ ಎಂದರು.
ಓದಿ: ಗ್ರಾ.ಪಂ. ಚುನಾವಣೆ ಅಖಾಡಕ್ಕಿಳಿದ ಮಾಜಿ ಸಚಿವರ ಪುತ್ರಿಯರು
ಹೊಸಪೇಟೆಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎನ್ ಎಫ್ ಇಮಾಮ್ ನಿಯಾಜಿ ಅವರು ಮಾತನಾಡಿ, ಈಗ 41 ಸ್ಥಾನಗಳು ಅವಿರೋಧ ಆಯ್ಕೆಯಾಗಲಿವೆ. ಉಳಿದ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸಲಾಗುವುದು. ಅಲ್ಲದೇ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.