ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಸಮೀಪದ ಎಂಎಸ್ ಪಿಎಲ್ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ತಡರಾತ್ರಿ ರಸ್ತೆ ವಿಭಜಕ್ಕೆ ಬೈಕ್ವೊಂದು ಡಿಕ್ಕಿಹೊಡೆದ ಪರಿಣಾಮ ಸವಾರನೊಬ್ಬ ಮೃತ ಪಟ್ಟಿದ್ದಾನೆ.
ಹೊಸಪೇಟೆ ನಗರದ ಮಂಜುನಾಥ ಗುಜ್ಜಲ್ (28) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಸವಾರ ಶಬರಿ ಎನ್ನುವರಿಗೆ ಗಾಯಗಳಾಗಿದ್ದು, ನಗರದ ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಎಂದು ದಾಖಲಿಸಲಾಗಿದೆ. ತನ್ನ ಸ್ನೇಹಿತರೊಂದಿಗೆ ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಗಾಣಗಟ್ಟಿ ಮಾಯಮ್ಮ ದೇಗುಲ ದರುಶನಕ್ಕೆ ತೆರಳಿದ್ದಾನೆ. ಕೂಡ್ಲಿಗಿ ತಾಲೂಕಿನ ಗಾಣಗಟ್ಟಿ ಮಾಯಮ್ಮ ದೇಗುಲದ ದರ್ಶನ ಪಡೆದು ವಾಪಸ್ ಹೊಸಪೇಟೆಗೆ ತೆರಳುತ್ತಿರುವಾಗ ಅತೀ ವೇಗದಿಂದ ಬೈಕ್ ಚಲಾಯಿಸಿದ್ದರಿಂದ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.