ಬಳ್ಳಾರಿ: ಪ್ಯಾನ್ ಇಂಡಿಯಾ ಕಬ್ಜ ಸಿನಿಮಾದಲ್ಲಿ ಸಹ ಕಲಾವಿದನಾಗಿ ಗಣಿನಾಡಿನ ಕೌಶಿಕ್ ಅವರು ನಟಿಸಲಿದ್ದಾರೆಂದು ನಿರ್ದೇಶಕ ಆರ್.ಚಂದ್ರು ತಿಳಿಸಿದ್ದಾರೆ.
ಬಳ್ಳಾರಿಯ ಕನಕದುರ್ಗಮ್ಮ ದೇಗುಲಕ್ಕಿಂದು ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಫೆಬ್ರವರಿ 7ರಂದು ನನ್ನ ಜನ್ಮದಿನವಾಗಿದ್ದು, ಅದನ್ನು ನೆನಪಿಸಿ ಕೊಟ್ಟವರು ಗಣಿನಗರಿಯ ನನ್ನ ಆತ್ಮೀಯ ಸ್ನೇಹಿತರು. ಮೈಲಾರಿ ಸಿನಿಮಾದ ಸಕ್ಸಸ್ ಇಲ್ಲಿಂದಲೇ ಆಗಿದೆ. ಹಾಗಾಗಿ, ಬಳ್ಳಾರಿ ಜಿಲ್ಲೆಗೆ ಬಂದಿರುವುದಾಗಿ ತಿಳಿಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿಷನ್ ನಡೆಸಲಾಯಿತು. ಸರಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಮಂದಿ ಕಲಾವಿದರು ಭಾಗಿಯಾಗಿದ್ದರು. ಅದರೊಳಗೆ 200 ಜನ ಸೆಲೆಕ್ಟ್ ಆಗಿದ್ದರು. ಕೇವಲ ಐದು ಮಂದಿ ಕಲಾವಿದರನ್ನು ಮಾತ್ರ ಗುರುತಿಸಲಾಗಿತ್ತು. ಆ ಪೈಕಿ ಕೌಶಿಕ್ ಕೂಡ ಒಬ್ಬರು. ನಾಯಕ ನಟ ಉಪೇಂದ್ರ ಅವರೊಂದಿಗೆ ಈ ಕೌಶಿಕ್ ನಟಿಸಲಿದ್ದಾರೆ ಎಂದರು.
ಬಳ್ಳಾರಿಯ ಕನಕದುರ್ಗಮ್ಮ ದೇಗುಲದ ಪ್ರಧಾನ ಧರ್ಮಕರ್ತರಾದ ಪಿ.ಗಾದೆಪ್ಪನವರ ಪುತ್ರನಾಗಿದ್ದಾನೆ ಈ ಕೌಶಿಕ್ ಎಂದು ಹೇಳೋದೇ ನಮಗೆ ಹೆಮ್ಮೆಯ ಸಂಗತಿ. ಕಬ್ಜಾ ಸಿನಿಮಾವು ತೆಲುಗು, ತಮಿಳು, ಕನ್ನಡ, ಇಂಗ್ಲೀಷ್, ಮಲಯಾಳಿ, ಹಿಂದಿ, ಮರಾಠಿ, ಬೆಂಗಾಲಿ ಭಾಷೆಗಳಲ್ಲಿ ಚಿತ್ರೀಕರಣಗೊಳ್ಳಲಿದೆ. ಈ ವರ್ಷಾಂತ್ಯಕ್ಕೆ ಸಿನಿಮಾ ಬಿಡುಗಡೆ ಮಾಡಲು ಚಿಂತನೆ ನಡೆಸಲಾಗಿದೆ ಎಂದರು.
ಕಬ್ಜಾ ಸಿನಿಮಾದ್ದು ದೊಡ್ಡ ಬಜೆಟ್ ಆಗಿದೆ. ನನ್ನ ಜೀವನ ಮತ್ತು ಇಂಡಸ್ಟ್ರಿಯನ್ನು ದೊಡ್ಡಮಟ್ಟಕ್ಕೆ ಕೊಂಡೊಯ್ಯುವ ಚಿತ್ರ ಇದಾಗಿದ್ದು, ಬಜೆಟ್ 90 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದರಲ್ಲಿ ದೊಡ್ಡ ಮಟ್ಟದ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಕನ್ನಡದಲ್ಲಿ ನೂರಾರು ಕೋಟಿ ಬಜೆಟ್ ಹಾಕಿ ಸಿನಿಮಾ ಮಾಡುವುದು ಸುಲಭವಲ್ಲ. ಫೆ. 7ರ ಹುಟ್ಟು ಹಬ್ಬದಂದೇ ಎರಡನೇ ಹಂತದ ಚಿತ್ರಿಕರಣ ಶುರುವಾಗಲಿದೆ. ಮುಂಬಯಿ, ಮಧುರೈ, ಜಾರ್ಖಂಡ್ ಸೇರಿ ಇತರೆಡೆ ಚಿತ್ರೀಕರಣಗೊಳ್ಳಲಿದೆ ಎಂದರು.
ಈ ಸಿನಿಮಾದಲ್ಲಿ ಉಪೇಂದ್ರ, ಕಾಜಲ್ ಅಗರವಾಲ್, ಜಗಪತಿ ಬಾಬು, ಸಮುದ್ರ ಕೇಣಿ, ಪ್ರಕಾಶ ರೈ ಸೇರಿ ದೊಡ್ಡ ನಟರು ನಟಿಸಲಿದ್ದಾರೆ. ಇಂದೊಂದು ಭೂಗತ ಲೋಕದ ಕಥೆಯಾಧಾರಿತ ವಿಭಿನ್ನ ಚಿತ್ರವಾಗಿದೆ. 1980 ರಿಂದ ಲಾಂಗ್, ಮಚ್ಚು ಅಷ್ಟೇ ಇತ್ತು. ಇದು 1947- 84 ದಶಕದ ಅವಧಿಯಲ್ಲಿನ ಕಥೆಯಾಧಾರಿತ ಸಿನಿಮಾ ಎಂದರು.