ಬಳ್ಳಾರಿ : ಗಣಿನಾಡು ಬಳ್ಳಾರಿ ಜಿಲ್ಲೆಯ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿವೆ. ಅಗತ್ಯ ವೈದ್ಯರ ಮತ್ತು ಸ್ಟಾಫ್ ನರ್ಸ್ ಗಳ ಕೊರತೆಯಿಂದ ಜಿಲ್ಲೆಯ ನಾನಾ ಗ್ರಾಮಗಳ ಗ್ರಾಮಸ್ಥರಿಗೆ ಸಮರ್ಪಕ ಆರೋಗ್ಯ ಸೇವೆ ಒದಗಿಸುವಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಫಲವಾಗಿರೋದು ಮೇಲ್ನೋಟಕ್ಕೆ ಕಂಡುಬಂದಿದೆ.
ಜಿಲ್ಲೆಯ ಮುಷ್ಟಗಟ್ಟೆ, ಹರಪನಹಳ್ಳಿ, ಕೂಡ್ಲಿಗಿ ತಾಲೂಕಿನ ಬೆಳ್ಳಿಗಟ್ಟೆ ಮತ್ತು ಸಿರುಗುಪ್ಪ, ಹೊಸಪೇಟೆ, ಕಂಪ್ಲಿ, ಕುರುಗೋಡು, ಕೊಟ್ಟೂರು, ಸಂಡೂರು, ಹಗರಿಬೊಮ್ಮನಹಳ್ಳಿಗಳ ಪ್ರಾಥಮಿಕ ಆರೋಗ್ಯ ಕೇಂದ್ರದ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ವೈದ್ಯರು, ಸ್ಟಾಫ್ ನರ್ಸ್ಗಳು ಮನಸೋ ಇಚ್ಛೆಯಂತೆ ಕರ್ತವ್ಯಕ್ಕೆ ಹಾಜರಾಗುತ್ತಾರೆ. ಅದರಿಂದ ರೋಗಿಗಳ ಆರೈಕೆ ಅಷ್ಟಕಷ್ಟೇ ಇರುತ್ತೆ ಎಂಬ ದೂರುಗಳು ಕೂಡಾ ಕೇಳಿಬರುತ್ತಿವೆ.
ಇನ್ನು ಪಶ್ಚಿಮ ತಾಲೂಕುಗಳ ನಾನಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿದ್ದರೆ, ಸ್ಟಾಫ್ ನರ್ಸ್ ಗಳು ಇರೋದಿಲ್ಲ. ಸ್ಟಾಫ್ ನರ್ಸ್ ಗಳಿದ್ದರೆ ವೈದ್ಯರು ಇರೋದಿಲ್ಲವಂತೆ.
ಕೂಡ್ಲಿಗಿ ತಾಲೂಕಿನ ಬೆಳ್ಳಿಗಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೆ ಹತ್ತಾರು ಗ್ರಾಮಗಳು ಬರುತ್ತವೆ. ಅಲ್ಲದೇ ರಾಮದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂದಾಜು 30ಕ್ಕೂ ಅಧಿಕ ಗ್ರಾಮಗಳ ಗ್ರಾಮಸ್ಥರು ಇದೆ ಆಸ್ಪತ್ರೆಯನ್ನು ನಂಬಿಕೊಂಡಿದ್ದಾರೆ. ಜರಿಮಲೆ, ನರಸಿಂಹನಹಳ್ಳಿ, ಗೆಜ್ಜಲಗಟ್ಟೆ ಗುಡ್ಡಗಾಡು ಪ್ರದೇಶಗಳಲ್ಲಿ ವಿಪರೀತ ಕರಡಿಗಳು ವಾಸಿಸುತ್ತಿದ್ದು, ಕರಡಿದಾಳಿಗೆ ಒಳಗಾದವರನ್ನೂ ಕೂಡ ಇಲ್ಲಿ ದಾಖಲಿಸಲಾಗುತ್ತೆ. ಹೀಗಾಗಿ, ಆಸ್ಪತ್ರೆಯಲ್ಲಿ ವೈದ್ಯರು, ಸ್ಟಾಫ್ ನರ್ಸ್ ಗಳ ಕೊರತೆ ಇದೆ. ಸಮರ್ಪಕ ಚಿಕಿತ್ಸೆ ನೀಡಲು ಆರೋಗ್ಯ ಕೇಂದ್ರದಲ್ಲಿ ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.