ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಇನ್ನು ಮುಂದೆ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಪ್ರತಿಕ್ರಿಯೆಗಾಗಿ ಠಾಣೆಗೊಂದು ಟ್ವಿಟರ್ ಖಾತೆ ಮಾಡಿ ಸಾರ್ವಜನಿಕರು ಮಾಹಿತಿ, ಪೋಟೊ, ವಿಡಿಯೋ ಹಾಕಬಹುದು ಎಂದು ಜಿಲ್ಲಾ ವರಿಷ್ಠಾಧಿಕಾರಿ ಸಿ.ಕೆ ಬಾಬಾ ತಿಳಿಸಿದರು.
ಬಾಬಾ ಅವರು ಮಾತನಾಡಿ, ಬಳ್ಳಾರಿ ಜಿಲ್ಲಾ ಪೊಲೀಸ್ ನೇತೃತ್ವದಲ್ಲಿ ನಗರ ಪ್ರದೇಶಗಳಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ಹೋಗಿ ಕೇಸ್ ದಾಖಲಿಸುವುದು ತಡವಾಗಬಹುದು, ಅದಕ್ಕಾಗಿ ತಂತ್ರಜ್ಞಾನದ ಮೂಲಕ ತಕ್ಷಣ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಇನ್ನು ಗಂಭೀರ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಸ್ ಬೇಗನೆ ಪೊಲೀಸ್ ಇಲಾಖೆ ದಾಖಲಿಸುತ್ತದೆ ಎಂದರು.
ಗಲಾಟೆ, ಗದ್ದಲ, ಅಪರಾಧ, ಅಪಘಾತ, ಟ್ರಾಫಿಕ್ ಸಮಸ್ಯೆ ಮತ್ತು ಇನ್ನಿತರ ಘಟನೆಗಳ ಬಗ್ಗೆ ಪೊಲೀಸ್ ಠಾಣೆಗೆ ಬಂದು ಮಾಹಿತಿ ಕೊಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಸಾರ್ವಜನಿಕರು @BallariSp ಟ್ವಿಟರ್ ಖಾತೆಗೆ ಕಳಿಸಬಹುದು. ಅದಕ್ಕೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಸಮಸ್ಯೆಗಳ ಮಾಹಿತಿ, ಪೋಟೋ, ವಿಡಿಯೋ ಕಳಿಸಿದ್ರೆ ಅದಕ್ಕೆ ತಕ್ಷಣ ಪ್ರತಿಕ್ರಿಯೆ ಮತ್ತು ಆ ಪ್ರದೇಶದ ಪೊಲೀಸ್ ಠಾಣೆಗಳಿಂದ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬಗೆಹರಿಸುವ ಕೆಲಸವನ್ನು ಬಳ್ಳಾರಿ ಪೊಲೀಸ್ ಇಲಾಖೆ ಮಾಡುತ್ತದೆ ಎಂದು ತಿಳಿಸಿದರು.
ಠಾಣೆಗೊಂದು ಟ್ವಿಟರ್ ಖಾತೆ :
ಪ್ರಸ್ತುತ ಎಸ್.ಪಿ ಬಳ್ಳಾರಿ ಎನ್ನುವ ಖಾತೆ ಇದೆ ಹಾಗೂ ಮುಂದಿನ ದಿನಗಳಲ್ಲಿ ಬಳ್ಳಾರಿ ಜಿಲ್ಲೆಯ ಪ್ರತಿಯೊಂದು ಠಾಣೆಗಳಿಗೆ ಪ್ರತ್ಯೇಕ ಟ್ವಿಟರ್ ಖಾತೆಗಳನ್ನು ತೆಗೆಯಲಾಗುತ್ತದೆ ಅದನ್ನು ಅಧಿಕಾರಿ ನಿಭಾಯಿಸುತ್ತಾರೆ ಎಂದರು. ಜಿಲ್ಲೆಯ ವಿವಿಧ ತಾಲೂಕಗಳಾದ ಹಂಪಿ, ಹೊಸಪೇಟೆ, ಹಗರಿಬೊಮ್ಮನ ಹಳ್ಳಿ, ಹಡಗಲಿ, ಹರಪನಹಳ್ಳಿ, ಕೂಡ್ಲಿಗಿ, ಸಂಡೂರು, ಸಿರುಗುಪ್ಪ ಪ್ರದೇಶದಲ್ಲಿನ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಮಾಹಿತಿ, ಪೋಟೊ, ವಿಡಿಯೋ ವನ್ನು ಟ್ವಿಟ್ ಮಾಡಿದ್ರೇ ತಕ್ಷಣವೇ ಕ್ರಮ ತೆಗೆದುಕೊಳ್ಳಲು ಅನುಕೂಲವಾಗುತ್ತದೆ ಎಂದರು.