ಬಳ್ಳಾರಿ: ಯಾವುದೋ ಸಣ್ಣ ಪುಟ್ಟ ಕಾಯಿಲೆ ಬಂದರೆ ಸಾಕು ಮನೆಯಲ್ಲಿ ಕುಳಿತು ಮಾನಸಿಕವಾಗಿ ಕುಗ್ಗಿ ಹೋಗುವವರೇ ಹೆಚ್ಚು. ಆದ್ರೆ ಇಲ್ಲೊಬ್ಬ ಪೊಲೀಸ್ ಪೇದೆ ತನಗೆ ಮಾರಕ ಬ್ರೈನ್ ಟ್ಯೂಮರ್ ಕಾಯಿಲೆ ಇದ್ದರೂ ಸಹ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಯ ಗಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ನಗರದ ಡಿ.ಎ.ಆರ್ ಮೈದಾನದಲ್ಲಿ ಕಳೆದ ಮೂರು ದಿನಗಳಿಂದ ವಾರ್ಷಿಕ ಪೊಲೀಸ್ ಕ್ರೀಡಾಕೂಟ ನಡೆಯುತ್ತಿದ್ದು, ಇದರಲ್ಲಿ ಜಿಲ್ಲೆಯ ಸಿರುಗುಪ್ಪ ತಾಲೂಕು ತೆಕ್ಕಲಕೋಟೆಯ ಕಡ್ಲೇಗೆರೆ ಶಂಕರಪ್ಪ ಎಂಬ ಡಿ.ಎ.ಆರ್ ಪೊಲೀಸ್ ಪೇದೆ ಮಾರಕ ಬ್ರೈನ್ ಟ್ಯೂಮರ್ ಕಾಯಿಲೆಗೆ ತುತ್ತಾದರೂ 5 ಸಾವಿರ ಮೀಟರ್ ಓಟದಲ್ಲಿ ದ್ವೀತಿಯ ಸ್ಥಾನ ಮತ್ತು 400 ಹಾಗೂ100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
2008ರಲ್ಲಿ ಬಳ್ಳಾರಿ ಜಿಲ್ಲೆ ಡಿ.ಎ.ಆರ್ ಪೊಲೀಸ್ ಪೇದೆಯಾಗಿ ಶಂಕರಪ್ಪ ಆಯ್ಕೆಯಾಗಿದ್ದರು. ಪೇದೆ ಶಂಕರಪ್ಪಗೆ ಬ್ರೈನ್ ಟ್ಯೂಮರ್ ಕಾಯಿಲೆಗೆ ಇದೆ ಎಂದು ಗೊತ್ತಾಗಿದ್ದು 2017, ಮಾರ್ಚ್ ತಿಂಗಳಲ್ಲಿ. ಬಳಿಕ ಕಾಯಿಲೆಗೆ ಅವರು ನಾರಾಯಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ಮತ್ತೆ ಕಾಯಿಲೆ ಉಲ್ಬಣಗೊಂಡಿದ್ದು, ಸದ್ಯ ಮತ್ತೊಂದು ರೇಡಿಯೇಷನ್ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇವೆಲ್ಲದರ ಮಧ್ಯೆ ಪೇದೆ ಶಂಕರಪ್ಪ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಬಹುಮಾನ ಪಡೆದುಕೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.