ಬಳ್ಳಾರಿ: ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಮಹಾಮಾರಿ ಕೋವಿಡ್ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆ ಹೊಸದಾಗಿ ಸುಮಾರು 1,045 ಹುದ್ದೆಗಳ ಭರ್ತಿಗೆ ಬಳ್ಳಾರಿ ಜಿಲ್ಲಾಡಳಿತ ಮುಂದಾಗಿದೆ.
ನಗರದ ಟ್ರಾಮಾಕೇರ್ ಸೆಂಟರ್, ವಿಮ್ಸ್(ಜಿಲ್ಲಾಸ್ಪತ್ರೆ) ಮತ್ತು ಉಭಯ ಜಿಲ್ಲೆಗಳಲ್ಲಿನ ಕೋವಿಡ್ ಕೇರ್ ಸೆಂಟರ್ ನಲ್ಲಿ ದಾಖಲಾಗುವ ಕೋವಿಡ್ ಸೋಂಕಿತರ ಆರೋಗ್ಯ ವಿಚಾರಣೆ ಸಲುವಾಗಿ ಅಂದಾಜು 450 ಹುದ್ದೆಗಳು ಹಾಗೂ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನರುವ ಜಿಂದಾಲ್ ಸಮೂಹ ಸಂಸ್ಥೆಯು ತಾತ್ಕಾಲಿಕವಾಗಿ ಸ್ಥಾಪಿಸಲು ಉದ್ದೇಶಿರುವ ಅಂದಾಜು ಒಂದು ಸಾವಿರ ಹಾಸಿಗೆ ಸೌಲಭ್ಯವುಳ್ಳ ಕೋವಿಡ್ ಕೇರ್ ಸೆಂಟರ್ ನಲ್ಲಿ ಕಾರ್ಯ ನಿರ್ವಹಿಸಲು ಬೇಕಾಗುವ 600 ಹುದ್ದೆಗಳ ಭರ್ತಿಗೆ ಜಿಲ್ಲಾಡಳಿತ ಮುಂದಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ತಿಳಿಸಿದ್ದಾರೆ.
ಸ್ಟಾಫ್ ನರ್ಸ್, ಹೆಲ್ತ್ ಕೇರ್ ವರ್ಕರ್ಸ್ ಹಾಗೂ ನುರಿತ ವೈದ್ಯರು ಸೇರಿದಂತೆ ಡಿ ದರ್ಜೆಯ ನೌಕರರನ್ನೂ ಕೂಡ ಭರ್ತಿ ಮಾಡಿಕೊಳ್ಳಲಾಗುವುದು. ಮುಂದಿನ
ಆರು ತಿಂಗಳ ಅವಧಿಗೆ ಈ ಹುದ್ದೆಗಳು ಸಕ್ರಿಯವಾಗಿರುತ್ತವೆ. ರಾಜ್ಯ ಸರ್ಕಾರ ನೀಡೋ ವೇತನವನ್ನೇ ಈ ಹುದ್ದೆಗಳಿಗೆ ನೇಮಕವಾಗುವವರಿಗೆ ವೇತನ ನೀಡಲಾಗುವುದು ಎಂದರು.
ನುರಿತ ವೈದ್ಯರಿಗೆ ಅಂದಾಜು 2.5 ಲಕ್ಷದವರೆಗೂ ವೇತನ ನೀಡಲು ನಿರ್ಧರಿಸಲಾಗಿದೆ. ಫ್ರಂಟ್ಲೈನ್ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಅತ್ಯಾಕರ್ಷಕ ಇನ್ ಸೆಂಟಿವ್ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಕೋವಿಡ್ ಪಾಸಿಟಿವ್ ಖಾತ್ರಿಯಾದವರು ಹೆದರಬೇಡಿ:
ಕೋವಿಡ್ ಪಾಸಿಟಿವ್ ಖಾತ್ರಿಯಾದವರು ಹೆದರಬಾರದು, ನಿಮ್ಮೊಂದಿಗೆ ನಾವಿದ್ದೇವೆ. ಆಕ್ಸಿಜನ್ ಲೆವೆಲ್ ಕಡಿಮೆಯಾದರೆ ಕೂಡಲೇ ಆರ್ ಆರ್ ಟೀಮ್ ಗೆ ಮಾಹಿತಿ ನೀಡಿ. ಪಲ್ಸ್ ಆಕ್ಸಿಮೀಟರ್ ನ ಆಗಾಗ್ಗೆ ಪರೀಕ್ಷಿಸಿಕೊಳ್ಳಿ. ಹೋಮ್ ಐಸೋಲೇಷನ್ ನಲ್ಲಿರುವವರು ಕಡ್ಡಾಯವಾಗಿ ಏಳು ದಿನಗಳ ಕಾಲ ಮನೆಯಲ್ಲೇ ಇದ್ದರೆ, ಈ ಕೋವಿಡ್ ಸೋಂಕನ್ನ ಹೊಡೆದೋಡಿಸಬಹುದು ಎಂದು ಸಲಹೆ ನೀಡಿದ್ದಾರೆ.