ಬಳ್ಳಾರಿ: ನದಿಯಲ್ಲಿ ತೆಪ್ಪ ಮಗುಚಿದ ಪರಿಣಾಮ ಮದುವೆಗೆ ಆಹ್ವಾನಿಸಲು ಹೊರಟಿದ್ದ ಮಧುಮಗ ಸೇರಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ, ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಸೀಗನಹಳ್ಳಿ ಗ್ರಾಮದ ತುಂಗಭದ್ರಾ ನದಿಯ ಹಿನ್ನೀರಿನಲ್ಲಿ ಭಾನುವಾರ ನಡೆದಿದೆ.
ಸೀಗನಹಳ್ಳಿಯಿಂದ ನದಿಯಲ್ಲಿ ತೆಪ್ಪದ ಮೂಲಕ ಕೊಪ್ಪಳದ ಕಡೆ ಹೊರಟಿದ್ದ ಯುವಕರು, ರಿಪೇರಿಯಿದ್ದ ತೆಪ್ಪ ಹತ್ತಿದ್ದರಿಂದ ಸಾವೀಗೀಡಾಗಿದ್ದಾರೆ. ಫಕ್ರುದ್ದೀನ್ (28), ಯಮುನೂರಪ್ಪ(17) ಮೃತರು. ಫಕ್ರುದ್ದೀನ್ ಅವರ ಮದುವೆ ಹಿನ್ನೆಲೆ ಹೊಸಪೇಟೆ ತಾಲೂಕಿನ ಕಾದಿಗನೂರು ಸಮೀಪದ ಡಿ.ಜಿ. ಕ್ಯಾಂಪ್ ನಿವಾಸಿ ಯಮನೂರಪ್ಪನನ್ನು ಕರೆದುಕೊಂಡು ಮದುವೆ ಕಾರ್ಡ್ ಕೊಡಲು ಹೊರಟಿದ್ದರು.
ನದಿ ಸಮೀಪ ತೆಪ್ಪವೊಂದು ಬಿದ್ದಿರುವುದನ್ನು ಕಂಡು ಅದನ್ನೇ ತೆಗೆದುಕೊಂಡು ನದಿಯಲ್ಲಿ ಹೊರಟಿದ್ದಾರೆ. ತೆಪ್ಪ ಸರಿಯಾಗಿ ಇರದೇ ಇರುವುದರಿಂದ ಮಗುಚಿ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.