ಬಳ್ಳಾರಿ: ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕ ನುಡಿಯ ಧ್ವನಿ ಸುರುಳಿಯನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲು ಜಿಲ್ಲಾಡಳಿತ ಸೂಕ್ತ ಕ್ರಮವಹಿಸಲು ನಿರ್ಧರಿಸಿದೆ.
ಓದಿ: ಸಿಲಿಕಾನ್ ಸಿಟಿಯ ಅಪಾರ್ಟ್ಮೆಂಟ್ವೊಂದರಲ್ಲಿ 103 ಮಂದಿಗೆ ಕೊರೊನಾ ಸೋಂಕು
ಬಳ್ಳಾರಿಯ ಡಿಸಿ ಕಚೇರಿಯ ಸಭಾಂಗಣದಲ್ಲಿಂದು ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡಿಸಿ ಪವನಕುಮಾರ್ ಮಾಲಪಾಟಿ. ಈ ಬಾರಿ ಮೈಲಾರ ಕಾರಣಿಕೋತ್ಸವ ಹಾಗೂ ಮೈಲಾರ ಲಿಂಗನ ಜಾತ್ರಾ ಮಹೋತ್ಸವವನ್ನ ಅತ್ಯಂತ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಮೈಲಾರ ಗ್ರಾಮದ ಭಕ್ತರನ್ನ ಹೊರತುಪಡಿಸಿದರೆ ಹೊರಗಿನಿಂದ ಬರುವ ಭಕ್ತರ ಪ್ರವೇಶಾತಿಯನ್ನ ನಿಷೇಧಿಸಲಾಗಿದೆ ಎಂದರು.
ಪ್ರತಿ ವರ್ಷದಂತೆಯೇ ಈ ಬಾರಿಯೂ ಕೂಡ ಮೈಲಾರ ಲಿಂಗೇಶ್ವರ ಸ್ವಾಮಿಯ ಸನ್ನಿಧಾನದಲಿ ಕಾರಣಿಕೋತ್ಸವದ ನುಡಿ ಹಾಗೂ ಜಾತ್ರೆ ನಡೆಯಲಿದೆ. ಆದರೆ, ದೂರದ ರಾಯಚೂರು, ಕೊಪ್ಪಳ, ಹಾವೇರಿ ಹಾಗೂ ದಾವಣಗೆರೆ ಜಿಲ್ಲೆ ಸೇರಿದಂತೆ ಬೆಂಗಳೂರಿಂದ ಬರುವ ಭಕ್ತರಿಗೆ ಮೈಲಾರ ಲಿಂಗೇಶ್ವರ ಸ್ವಾಮಿಯ ಜಾತ್ರೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.
ಈ ಬಾರಿ ಕೋವಿಡ್ ಇರುವುದರಿಂದ ಇಂತಹ ನಿರ್ಧಾರಕ್ಕೆ ಬರಲಾಗಿದೆ. ಈ ಮೈಲಾರ ಲಿಂಗೇಶ್ವರನ ದೈವವಾಣಿ ಎಂದೇ ನಂಬಿಕೆ ಇಟ್ಟಿರುವ ಸಹಸ್ರಾರು ಭಕ್ತರಿಗೆ ಈ ಬಾರಿಯ ಕಾರಣಿಕ ನುಡಿಯನ್ನ ರೆಕಾರ್ಡ್ ಮಾಡಿ, ವಾಟ್ಸ್ಆ್ಯಪ್ ಗ್ರೂಪ್ ಗಳಲ್ಲಿ ಹರಿಬಿಡಲಾಗುವುದು ಎಂದು ಡಿಸಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಮಾತನಾಡಿ, ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಮೈಲಾರ ಲಿಂಗೇಶ್ವರನ ಕಾರಣಿಕೋತ್ಸವದ ನಿಮಿತ್ತ ಐದು ಕಡೆಗಳಲ್ಲಿ ಚೆಕ್ಪೋಸ್ಟ್ ಗಳನ್ನ ಸ್ಥಾಪಿಸಲಾಗಿದೆ. ಫೆಬ್ರವರಿ 19ರ ಮಧ್ಯಾಹ್ನದಿಂದಲೇ ಅವುಗಳು ಕಾರ್ಯ ನಿರ್ವಹಿಸಲಿವೆ ಎಂದರು.