ಬಳ್ಳಾರಿ: ಮಟ್ಕಾ ನಿಯಂತ್ರಣಕ್ಕೆ ಮುಂದಾಗಿರುವ ಜಿಲ್ಲಾ ಪೊಲೀಸರು ಮಟ್ಕಾ ಬುಕ್ಕಿಗಳನ್ನು ಗಡಿಪಾರು ಮಾಡಲು ಮುಂದಾಗಿದ್ದಾರೆ. ಬಳ್ಳಾರಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಟ್ಕಾ ಬುಕ್ಕಿಗಳನ್ನು ಗುರುತಿಸಿರುವ ಪೊಲೀಸ್ ಇಲಾಖೆ, ಅವರನ್ನು ಗಡಿಪಾರು ಮಾಡಲು ಎಸ್ಪಿ ಸೈದುಲು ಅಡಾವತ್ ಪಟ್ಟಿ ಸಿದ್ಧಗೊಳಿಸಿದ್ದಾರೆ. ಒಟ್ಟು 18 ಜನರನ್ನು ಗಡಿಪಾರು ಮಾಡಲು ಜಿಲ್ಲಾ ಪೊಲೀಸ್ ಕಚೇರಿಯಿಂದ ಶಿಫಾರಸು ಮಾಡಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಇದೀಗ 4 ಜನರನ್ನು ಗಡಿಪಾರು ಮಾಡಲು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಆದೇಶ ನೀಡಿದ್ದಾರೆ.
ಈ ಕುರಿತಂತೆ ಡಿಸಿ ಅವರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, 18 ಜನರ ಪೈಕಿ, ಮೊದಲನೇ ಹಂತದಲ್ಲಿ 2 ಜನರಿಗೆ, ಎರಡನೇ ಹಂತದಲ್ಲಿ 3 ಜನರಿಗೆ ಗಡಿಪಾರು ಆದೇಶವಾಗಿತ್ತು. ಇದೀಗ 4 ಮಟ್ಕಾ ಬುಕ್ಕಿಗಳಿಗೆ ಗಡಿಪಾರು ಆದೇಶವಾಗಿದೆ.
ಎ.ಪಿ.ಎಂ.ಸಿ. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಟ್ಕಾ ಜೂಜಾಟ ನಡೆಸುತ್ತಿದ್ದ ಸುಂಕಪ್ಪ (25), ಸಲೀಂ ಅಲಿಯಾಸ್ ಸೇರ್ವಾ ಸಲೀಂ ಭಾಷ (44), ಸಂಡೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೆ. ನಾಗರಾಜ ಅಲಿಯಾಸ್ ಕುಲ್ಲ ನಾಗರಾಜ (60) ಹಾಗೂ ಹಚ್ಚೆಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಟ್ಕಾ ಜೂಜಾಟ ನಡೆಸುತ್ತಿದ್ದ ಅಮರೇಶ್‌ಗೌಡ (43) ಗಡಿಪಾರು ಆದೇಶಕ್ಕೊಳಗಾದವರು.
ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಸಿದ್ದರಾಮಯ್ಯ ಭೇಟಿಯಾದ ಜೆಡಿಎಸ್ ನಿಯೋಗ
ಸದರಿ ವ್ಯಕ್ತಿಗಳನ್ನು ಬಳ್ಳಾರಿ ಜಿಲ್ಲೆಯಿಂದ ಬೇರೆ ಜಿಲ್ಲಾ ವ್ಯಾಪ್ತಿಗೆ ಗಡಿಪಾರು ಮಾಡಲು ಪಿ.ಎಸ್.ಐ. ಅವರುಗಳು ಸಲ್ಲಿಸಿದ ವರದಿಯನ್ನು ಅನುಮೋದಿಸಿ ಗಡಿಪಾರು ಪ್ರಸ್ತಾವನೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆಯಿತು. ಸುಂಕಪ್ಪ ಹಾಗೂ ಅಮರೇಶ್‌ಗೌಡ ಅವರನ್ನು ಮಂಗಳೂರು ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಗೆ ಮತ್ತು ಸಲೀಂ ಅಲಿಯಾಸ್ ಸೇರ್ವಾ ಸಲೀಂ, ಕೆ.ನಾಗರಾಜ ಅಲಿಯಾಸ್ ಕುಳ್ಳ ನಾಗರಾಜ ಅವರನ್ನು ಬೆಳಗಾವಿ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 9 ಮಟ್ಕಾ ದಂಧೆಕೋರರ ವಿರುದ್ಧ ಗಡಿಪಾರು ಆದೇಶ ಹೊರಡಿಸಲಾಗಿದೆ.