ಬಳ್ಳಾರಿ: ಮಹಾನಗರ ಪಾಲಿಕೆ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಸ್ವಪ್ರತಿಷ್ಠೆಯಾಗಿದೆ. ಜೆಡಿಎಸ್ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಹೌದು, ಮಹಾನಗರ ಪಾಲಿಕೆ ಚುನಾವಣೆಯನ್ನ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಸವಾಲಾಗಿ ಸ್ವೀಕರಿಸಿದ್ದಾರೆ. ಹೀಗಾಗಿ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಹಗಲು, ರಾತ್ರಿಯೆನ್ನದೆ ವಾರ್ಡ್ವಾರು ಪ್ರಚಾರ ನಡೆಸುತ್ತಿದ್ದಾರೆ.
ದಿನದ 24 ಗಂಟೆಯೂ ಕೂಡ ಮತದಾರರ ಮನೆ ಬಾಗಿಲಿಗೆ ಹೋಗಿ ಈ ಬಾರಿ ಬಿಜೆಪಿಗೆ ಮತ ನೀಡಿ ಎಂದು ವಿನಂತಿಸಿಕೊಳ್ಳುತ್ತಿದ್ದಾರೆ. ಸಾವಧಾನವಾಗಿ ಆಯಾ ವಾರ್ಡ್ಗಳಲ್ಲಿನ ಸಮಸ್ಯೆಗಳನ್ನ ಆಲಿಸಿ, ನೋಟ್ ಮಾಡಿಕೊಂಡು ಮುಂದಿನ ದಿನಗಳಲ್ಲಿ ಮಹಾನಗರ ಪಾಲಿಕೆ ಆಡಳಿತ ಬಿಜೆಪಿ ತೆಕ್ಕೆಗೆ ಬಂದರೆ ಖಂಡಿತವಾಗಿಯೂ ನಿಮ್ಮ ಎಲ್ಲ ಸಮಸ್ಯೆಗಳನ್ನ ಕೊಂಚ ಮಟ್ಟಿಗೆ ಈಡೇರಿಸುವ ಭರವಸೆಯನ್ನೂ ಕೂಡ ನೀಡುತ್ತಿರೋದು ಕಂಡು ಬರುತ್ತಿದೆ.
ಇನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿಯೇ ಅಂತಿಮವಾಗಿಲ್ಲ. ಸೋಮವಾರ 3ನೇ ಸಭೆ ಆಯೋಜಿಸಿದ್ದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮುಖಂಡರು ಒಂದೊಂದು ವಾರ್ಡ್ಗೆ ತಲಾ ಮೂರು ಅಭ್ಯರ್ಥಿಗಳುಳ್ಳ ಪಟ್ಟಿಯನ್ನ ಕೆಪಿಸಿಸಿಗೆ ಕಳುಹಿಸಿದ್ದಾರೆ. ಅಲ್ಲಿಂದ ಅಂತಿಮ ಪಟ್ಟಿ ಈವರೆಗೆ ಬಂದಿಲ್ಲ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರ ಸದ್ಯದ ಮಟ್ಟಿಗೆ ತಟಸ್ಥವಾಗಿದೆ.
ಉಳಿದಂತೆ ಜೆಡಿಎಸ್ ಪಕ್ಷಕ್ಕೆ ಜಿಲ್ಲೆಯಲ್ಲಿ ನಾಯಕರೇ ಇಲ್ಲ. ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣಾ ಅಕಾಂಕ್ಷಿಗಳ ಪಟ್ಟಿಯಂತೂ ದೂರದ ಮಾತಾಗಿದೆ. ಕೇವಲ ನಾಲ್ಕಾರು ವಾರ್ಡ್ಗಳಲ್ಲಿ ಮಾತ್ರ ಜೆಡಿಎಸ್ನ ಅಭ್ಯರ್ಥಿಗಳು ಕಣಕ್ಕಿಳಿಯುವ ಸಾಧ್ಯತೆಯಿದೆ.
ಬಳ್ಳಾರಿ ನಗರ ಶಾಸಕರ ಪುತ್ರ ಕಣದಲ್ಲಿ:
ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿಯವರ 2ನೇ ಪುತ್ರ ಗಾಲಿ ಶ್ರವಣಕುಮಾರ ರೆಡ್ಡಿ 18ನೇ ವಾರ್ಡ್ನಿಂದ ಕಣಕ್ಕಿಳಿದಿದ್ದಾರೆ. ಶಾಸಕ ಸೋಮಶೇಖರ ರೆಡ್ಡಿ ತಮ್ಮ ಪುತ್ರನನ್ನ ಹೇಗಾದ್ರೂ ಮಾಡಿ ಗೆಲ್ಲಿಸಲೇಬೇಕೆಂಬ ಪಣ ತೊಟ್ಟಿದ್ದಾರೆ.
ಇಂದು ಬಿಸಿಲಹಳ್ಳಿ ಹಾಗೂ ಜನತಾ ನಗರದಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದು, ಮನೆ ಮನೆಗೂ ತೆರಳಿ ವಾರ್ಡ್ನಲ್ಲಿರುವ ಸಮಸ್ಯೆಗಳನ್ನ ಸಾವಧಾನವಾಗಿ ಆಲಿಸಿದ್ದಾರೆ. ನನ್ನ ಮಗನ ಗೆಲುವಿಗೆ ಶ್ರಮಿಸಿದ್ರೆ ನಿಮ್ಮ ಸಮಸ್ಯೆಗಳನ್ನ ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದ್ದಾರೆ.
ಯುವ ಜನರ ಸ್ಪರ್ಧೆ ಹೆಚ್ಚಿದೆ:
ಈ ಬಾರಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಯುವಕರೇ ಹೆಚ್ಚು ಮಂದಿ ಸ್ಪರ್ಧೆಗೆ ಇಳಿದಿರೋದು ಕೂಡ ತೀವ್ರ ಕುತೂಹಲ ಮೂಡಿಸಿದೆ. ಇದಲ್ಲದೇ, ಬಳ್ಳಾರಿ ಬೆಳಗಾಯಿತು ಪ್ರಾದೇಶಿಕ ದಿನಪತ್ರಿಕೆಯ ಉಪ ಸಂಪಾದಕ ಅನೂಪ್ ಕೂಡ ಬಿಜೆಪಿಯಿಂದ ಸ್ಪರ್ಧೆಗೆ ಇಳಿದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಕಳೆದ 2008ನೇ ಇಸವಿಯ ನಂತರ ಬಳ್ಳಾರಿ ಮಹಾನಗರ ಪಾಲಿಕೆ ಅಧಿಕಾರವನ್ನ ಬಿಜೆಪಿ ಹಿಡಿಯದಿರೋದಕ್ಕೆ ವೈಯಕ್ತಿಕವಾಗಿ ನನಗೆ ಬೇಸರ ಮೂಡಿಸಿದೆ. ಹೀಗಾಗಿ, ಈ ಬಾರಿಯಾದ್ರೂ ಮಹಾನಗರ ಪಾಲಿಕೆ ಆಡಳಿತವನ್ನ ಹಿಡಿಯಲೇಬೇಕಿದೆ. 2008 ರಲ್ಲಾದ ಅಭಿವೃದ್ಧಿ ಕಾರ್ಯಗಳು ಬಿಟ್ಟರೆ ಈವರೆಗೂ ಅಭಿವೃದ್ಧಿ ಕಾರ್ಯಗಳು ಬಹುತೇಕ ಕುಂಠಿತ ಆಗಿವೆ. ಅವುಗಳಿಗೆ ಪುನಶ್ಚೇತನ ನೀಡಬೇಕಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಯುವ ಮುಖಂಡ ಜೆ.ಎಸ್.ಆಂಜನೇಯಲು ಮಾತನಾಡಿ, ಪ್ರಧಾನಿ ಮೋದಿಯವರ ಹಿಂದೆ ಯುವಜನರ ಪಡೆಯಿದೆ ಎಂದು ಬಿಜೆಪಿಯವರು ಹೋದಲ್ಲೆಲ್ಲ ಬೊಬ್ಬೆ ಹೊಡಿತಾ ಇದ್ದರು. ಆದರೆ, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ನತ್ತ ಯುವಜನರ ಪಡೆ ವಾಲಿದೆ. ಈವರೆಗೂ ಕೂಡ ಅಂದಾಜು 180ಕ್ಕೂ ಅಧಿಕ ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿಯವರಿಗೆ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಸಾಮಾನ್ಯ ಹಾಗೂ ನಿಷ್ಠಾವಂತ ಕಾರ್ಯಕರ್ತರಿಗೆ ಮಾತ್ರ ಕಾಂಗ್ರೆಸ್ ಪಕ್ಷ ಟಿಕೆಟ್ ಹಂಚಿಕೆ ಮಾಡಿದೆ. ಹೀಗಾಗಿ, ಈ ಬಾರಿ ಕಾಂಗ್ರೆಸ್ ಪಕ್ಷ ಮಹಾನಗರ ಪಾಲಿಕೆ ಆಡಳಿತದ ಚುಕ್ಕಾಣಿ ಹಿಡಿಯೋದು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.