ಬಳ್ಳಾರಿ : ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಶತಾಯುಷಿ ಅಜ್ಜಿಯೊಬ್ಬರು ಮಹಾಮಾರಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಹಡಗಲಿ ತಾಲೂಕಿನ ನಿವಾಸಿ ಹಾಲಮ್ಮ (100) ಅವರು ಈ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ತಾನಿದ್ದ ಮನೆಯಲ್ಲಿಯೇ ಹೋಂ ಐಸೋಲೇಷನ್ಗೊಳಗಾಗಿದ್ದ ಅಜ್ಜಿ ಈಗ ಸಂಪೂರ್ಣ ಗುಣಮುಖರಾಗಿ ಅಚ್ಚರಿಗೂ ಕಾರಣರಾಗಿದ್ದಾರೆ.
ಅಜ್ಜಿಯ ಮನೆಯಲ್ಲಿ ಮಗನಿಗೆ ಕೊರೊನಾ ಬಂದಿದ್ದ ಹಿನ್ನೆಲೆ ಅಜ್ಜಿ ಹಾಲಮ್ಮನಿಗೂ ಪರೀಕ್ಷೆ ನಡೆಸಿದ್ದ ವೇಳೆ ಕೊರೊನಾ ಸೋಂಕಿರುವುದು ದೃಢವಾಗಿತ್ತು. ಕಳೆದ 15 ದಿನಗಳ ಹಿಂದೆ ಅಜ್ಜಿಗೆ ಕೊರೊನಾ ಪತ್ತೆಯಾಗಿತ್ತು. ವೈದ್ಯರು ನೀಡಿದ ಸಲಹೆ, ಸೂಚನೆಯಂತೆ ಮನೆಯಲ್ಲೇ ಚಿಕಿತ್ಸೆ ಪಡೆದು ಇದೀಗ ಗುಣಮುಖರಾಗಿದ್ದಾರೆ.
ಇನ್ನು, ಇವರ ಜೊತೆ ಮನೆಯಲ್ಲಿದ್ದ ನಾಲ್ವರಿಗೂ ಕೊರೊನಾ ದೃಢವಾಗಿತ್ತು. ಇವರೆಲ್ಲರೂ ಗುಣಮುಖರಾಗಿರುವುದು ಸಹ ಜನತೆಗೆ ಧೈರ್ಯ ತಂದಿದೆ. ಈ ವಿಷಯ ತಿಳಿದು ಹೂವಿನ ಹಡಗಲಿ ತಹಶೀಲ್ದಾರ್ ವಿಜಯಕುಮಾರ್, ತಾಪಂ ಇಒ ಸೇರಿ ಇತರರು ಅಜ್ಜಿಯಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.